Saturday, October 12, 2024

Latest Posts

ದೇಶದ ನಾಯಕತ್ವ ಬದಲಾವಣೆಗೆ ಈ ಚುನಾವಣೆ: ಡಿಕೆಶಿ

- Advertisement -

ದೇಶದ ಆಳ್ವಿಕೆ ಮತ್ತು ನಾಯಕತ್ವ ಬದಲಾವಣೆಗೆ ಈ ಬಾರಿ ಲೋಕಸಭೆ ಚುನಾವಣೆ ನಡೆಯುತ್ತಿದೆ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬಳ್ಳಾರಿ ಲೋಕಸಭೆ ಮೈತ್ರಿ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ‘ಸಮಾಜದ ಎಲ್ಲ ವರ್ಗದ ಜನರ ರಕ್ಷಣೆ ಅಗತ್ಯ’ ಎಂದು ಅಭಿಪ್ರಾಯಪಟ್ಟರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಉಗ್ರಪ್ಪನವರು ತಮಗೆ ಸಿಕ್ಕ ಸಣ್ಣ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ತಮಗೆ ಸಿಕ್ಕ ಒಂದೇ ಒಂದು ಸಂಸತ್ ಅಧಿವೇಶನದಲ್ಲಿ ಬಳ್ಳಾರಿ ಜನತೆಯ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ಅವರು ತಮ್ಮ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ನಿಮ್ಮ ಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅವರು ಸೇವೆ ಸಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ.

ಸತತ ಮೂರನೇ ಚುನಾವಣೆಗಾಗಿ ನಾನು ಬಳ್ಳಾರಿ ಜನರ ಮುಂದೆ ಬಂದಿದ್ದೇನೆ. ವಿಧಾನಸಭೆ ಹಾಗೂ ಉಪ ಚುನಾವಣೆ ನಂತರ ಈಗ ಲೋಕಸಭೆ ಚುನಾವಣೆಯಲ್ಲಿ ಮತ ಕೇಳಲು ಬಂದಿದ್ದೇನೆ. ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಹಬ್ಬ ಆಚರಣೆಗೆ ನಮಗಿದು ಸಿಕ್ಕ ಅವಕಾಶ.

ಬಳ್ಳಾರಿ ಕೂಡ ನನ್ನ ಆದ್ಯತೆ. ಜಿಲ್ಲೆಯ ಅಭಿವೃದ್ಧಿ ಆಗಬೇಕು. ಅದಕ್ಕಾಗಿ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ನಾವು ಶಾಂತಿ ಮೂಲಕ ಒಳ್ಳೆ ಆಡಳಿತ ನೀಡುತ್ತೇವೆ. ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇದೆ ಎಂದು ಬಿಜೆಪಿಯವರು ಬೇಕಾದರೆ ದುರುಪಯೋಗ ಮಾಡಿಕೊಳ್ಳಲಿ. ನಮಗೆ ಹಣ ಬೇಡ ಜನ ಬೇಕು.

ಶಾಸಕ ಗಣೇಶ್ ಜಾಮೀನು ನಮ್ಮ ಕೈಯಲಿಲ್ಲ. ಅದು ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ನಾಗೇಂದ್ರ ಯಾವತ್ತೂ ನಮ್ಮ ಜೊತೆಯಲ್ಲೇ ಇರ್ತಾರೆ.

ಮತದಾರರಿಗೆ ತಮ್ಮ ಮತ ಒಂದು ದೊಡ್ಡ ಅಸ್ತ್ರ. ಇದನ್ನು ಬಹಳ ಜವಾಬ್ದಾರಿಯುತವಾಗಿ ಬಳಸಬೇಕು. ಬಳ್ಳಾರಿಯ ಮಹಾಜನತೆ ಬಹಳ ವಿದ್ಯಾವಂತ, ಬುದ್ಧಿವಂತರು. ಇಲ್ಲಿ ಬಡತನವೂ ಇದೆ. ಶ್ರೀಮಂತಿಕೆಯೂ ಇದೆ. ಆದರೆ ಜನ ಬಹಳ ನೋವಿನಲ್ಲಿದ್ದಾರೆ. ಅವರ ನೋವು ಬಗೆ ಹರಿಸುವುದೇ ನಮ್ಮ ಗುರಿ.

ಕಳೆದ ಚುನಾವಣೆಯ ಪ್ರತಿಯೊಂದು ಸಂದರ್ಭದಲ್ಲಿ ಕೂಡ ನಾನು ಅಭಿವೃದ್ಧಿ ಮಂತ್ರವನ್ನು ಹೇಳಿದ್ದೆ. ಇಲ್ಲಿ ಶಾಂತಿ ನೆಲೆಸಬೇಕು. ಉತ್ತಮ ವಾತಾವರಣ ನಿರ್ಮಾಣವಾಗಬೇಕು.

ಕಳೆದ ಚುನಾವಣೆಯಲ್ಲಿ ಪಕ್ಷಬೇಧ ಮರೆತು ನಮಗೆ ಸಹಕರಿಸಿದ್ದೀರಿ. ಬಿಜೆಪಿ, ದಳದವರು ಸಹಾಯ ಮಾಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ನಮಗೆ ಹೆಚ್ಚಿನ ಮತ ಕೊಟ್ಟಿದ್ದಾರೆ.

ಚುನಾವಣೆ ನಂತರ ಕೂಡ ಅಭಿವೃದ್ದಿ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ಯುವಕರ ಉದ್ಯೋಗ ಸಮಸ್ಯೆ, ರೈತರ ಬೆಳೆಗೆ ಸರಿಯಾದ ಬೆಲೆ ಕೊಡುವುದು, ಅವರಿಗೆ ನೀರು ಪೂರೈಸುವುದು, ವಿದ್ಯುತ್ ಸಮಸ್ಯೆ ಬಗೆಹರಿಸುವುದು, ಎಲ್ಲ ವರ್ಗದ ಜನರಿಗೆ ರಕ್ಷಣೆ ನೀಡಲು ಆಡಳಿತ ನಡೆಸಿದ್ದೇವೆ. ಇದೇ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆ ನಡೆಸುತ್ತೇವೆ.

ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ನಮ್ಮ ಸರ್ಕಾರ ಶಾಂತಿಯನ್ನು ಪಾಲನೆ ಮಾಡಿಕೊಂಡು ಬಂದಿದೆ. ದೆಹಲಿಯಲ್ಲಿ ಒಳ್ಳೆ ಆಡಳಿತ ಕೊಡುತ್ತೇವೆ. ನಾನು ಕಳೆದ ಬಾರಿ ಮತ ಕೇಳುವಾಗ ಕೇವಲ ಐದು ತಿಂಗಳಿಗೆ ಉಗ್ರಪ್ಪನವರಿಗೆ ಮತ ನೀಡಿ ಎಂದು ಕೇಳಲಿಲ್ಲ. ಐದೂವರೆ ವರ್ಷಕ್ಕೆ ಮತ ನೀಡಿ ಎಂದು ಕೇಳಿದ್ದೆ.

ನಮ್ಮ ಪಕ್ಷ, ಮಹಾ ಜನತೆ, ಎಲ್ಲ ಸಂಘ ಸಂಸ್ಥೆಗಳು ಇವತ್ತು ಒಗ್ಗಟ್ಟಿನಿಂದ ಉಗ್ರಪ್ಪನವರಿಗೆ ಆಶೀರ್ವಾದ ಮಾಡುತ್ತಾರೆ. ಕಳೆದ ಚುನಾವಣೆಗಿಂತ ಹೆಚ್ಚಿನ ಮತ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ.’

- Advertisement -

Latest Posts

Don't Miss