ಫ್ರೀಡಂ ಹಬ್ಬ’ಕ್ಕೆ ವಿಧಾನಸೌಧ ಸಜ್ಜು – ಆಗಸ್ಟ್ 15ರಂದು ಬೆಳಗ್ಗೆ 11ರಿಂದ ರಾತ್ರಿ 10ರವರೆಗೆ ಮೆಗಾ ಸಂಭ್ರಮ!

ಸ್ವಾತಂತ್ರ್ಯ ದಿನವನ್ನು ಕೇವಲ ಸರ್ಕಾರಿ ಕಾರ್ಯಕ್ರಮ ಅಥವಾ ರಜಾ ದಿನವಾಗಿ ನೋಡದೆ, ಜನರೇ ಸ್ವಯಂಪ್ರೇರಿತವಾಗಿ ಆಚರಿಸುವ ಜನೋತ್ಸವವನ್ನಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಬಾರಿ “ಫ್ರೀಡಂ ಹಬ್ಬ”ವನ್ನು ಆಯೋಜಿಸುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಜಿಬಿಎ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 15ರಂದು ವಿಧಾನಸೌಧದ ಮುಂಭಾಗದಲ್ಲಿ ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ “ಫ್ರೀಡಂ ಹಬ್ಬ” ನಡೆಯಲಿದೆ ಎಂದರು.

ಸ್ವಾತಂತ್ರ್ಯ ದಿನವನ್ನು ಹೆಚ್ಚಿನವರು ರಜಾ ದಿನವೆಂದು ಪರಿಗಣಿಸಿ ಪ್ರವಾಸ, ಶಾಪಿಂಗ್ ಮುಂತಾದ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಆದರೆ ದೇಶದ ಸ್ವಾತಂತ್ರ್ಯ ಮತ್ತು ದೇಶಭಕ್ತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಎಲ್ಲರೂ ಸೇರಿ ಸಂಭ್ರಮಿಸುವ ವಾತಾವರಣ ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹ್ಯಾಂಡ್‌ಕ್ರಾಫ್ಟ್ ಹಾಗೂ ಆಹಾರ ಮಳಿಗೆಗಳು, ಮಕ್ಕಳ ಮೇಳ, ಆರ್ಟ್ ಮತ್ತು ಕ್ರಾಫ್ಟ್ ಚಟುವಟಿಕೆಗಳು, ಚಿತ್ರಕಲೆ ಸ್ಪರ್ಧೆ, ಕ್ವಿಜ್, ಬೀದಿ ನಾಟಕ, ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳ ಪ್ರದರ್ಶನ, ಸಂವಿಧಾನದ ಕುರಿತು ವಿಶೇಷ ಅರಿವು ಕಾರ್ಯಕ್ರಮಗಳು ಹಾಗೂ “ಫ್ರೀಡಂ ವಾಲ್” ನಿರ್ಮಿಸಿ ಸಾರ್ವಜನಿಕರು ತಮ್ಮ ಅಭಿಪ್ರಾಯ ದಾಖಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ “ಇಂಡಿಯಾ ಪೀಪಲ್ಸ್ ಪೆರೇಡ್” ಮೂಲಕ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಜನರು ತಮ್ಮ ಸಂಸ್ಕೃತಿ, ಆಚಾರ-ವಿಚಾರ, ಉಡುಗೆ, ಆಹಾರ ಪದ್ಧತಿ ಹಾಗೂ ಪ್ರಾದೇಶಿಕ ನೃತ್ಯ-ಸಂಗೀತವನ್ನು ಪ್ರದರ್ಶಿಸಲಿದ್ದಾರೆ. ಸಂಜೆ 6 ಗಂಟೆಯಿಂದ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಕೊನೆಯಲ್ಲಿ ಪಟಾಕಿ ಪ್ರದರ್ಶನಕ್ಕೂ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಭದ್ರತಾ ದೃಷ್ಟಿಯಿಂದ ಆನ್‌ಲೈನ್ ನೋಂದಣಿ ಕಡ್ಡಾಯವಾಗಿರುತ್ತದೆ. ನೋಂದಣಿ ವಿಧಾನವನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಸ್ಥಳದಲ್ಲಿಯೇ ಕ್ಯೂಆರ್ ಕೋಡ್ ಮೂಲಕವೂ ನೋಂದಣಿ ಮಾಡಲು ಅವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

About The Author