ಅಶ್ವಿನಿ ಪುನೀತ್‌ಗೆ MLC ಸ್ಥಾನ? ರಾಜಕೀಯಕ್ಕೆ ದೊಡ್ಮನೆ ಸೊಸೆ ಎಂಟ್ರಿ!

ಕರ್ನಾಟಕ ರಾಜಕಾರಣದಲ್ಲಿ ಈಗ ಮತ್ತೊಂದು ಹೊಸ ಹಾಗೂ ಕುತೂಹಲಕಾರಿ ಚರ್ಚೆ ಜೋರಾಗಿ ನಡೀತಿದೆ. ಹೌದು, ದೊಡ್ಮನೆ ಸೊಸೆ, ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹೆಸರು ವಿಧಾನ ಪರಿಷತ್ ಅಂದರೆ ಎಂಎಲ್ಸಿ ನಾಮನಿರ್ದೇಶನ ಪಟ್ಟಿಯಲ್ಲಿ ಕೇಳಿಬರುತ್ತಿದೆ.

ಹೌದು ‘ಕಲಾ ಕ್ಷೇತ್ರದ ಕೋಟಾದಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ. ನಟ ಪುನೀತ್ ನಿಧನದ ನಂತರ ಅಶ್ವಿನಿ ಅವರು ಪಿ.ಆರ್.ಕೆ ಪ್ರೊಡಕ್ಷನ್ಸ್ ಜವಾಬ್ದಾರಿಯ ಜೊತೆಗೆ, ಸಮಾಜಮುಖಿ ಕಾರ್ಯಗಳಲ್ಲಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಅವರಿರುವ ಗೌರವ ಹಾಗೂ ಕರುನಾಡಿನಾದ್ಯಂತ ಅಪ್ಪು ಮೇಲಿರುವ ಅಭಿಮಾನದ ಹಿನ್ನೆಲೆಯಲ್ಲಿ ಈ ಚರ್ಚೆ ಮುನ್ನೆಲೆಗೆ ಬಂದಿದೆ ಅಂತ ಹೇಳಲಾಗ್ತಿದೆ.

ಆದರೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ರಾಜಕೀಯ ಪ್ರವೇಶ ಅಥವಾ ಎಂಎಲ್ಸಿ ನಾಮನಿರ್ದೇಶನದ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಬದಲಿಗೆ ‘ಇದು ಕೇವಲ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಚರ್ಚೆಯಷ್ಟೇ ಆಗಿದೆ. ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶನಗೊಳ್ಳುವ 11 ಸ್ಥಾನಗಳ ಪೈಕಿ ಕಲಾ ಕ್ಷೇತ್ರಕ್ಕೂ ಅವಕಾಶವಿರುವುದರಿಂದ ಈ ಹೆಸರು ಸಹ ಕೇಳಿ ಬಂದಿದೆ.

ಅಸಲಿಗೆ ‘ಅಶ್ವಿನಿ ಅವರು ನಿಜವಾಗಿಯೂ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಅಥವಾ ವಿಧಾನ ಪರಿಷತ್ ಪ್ರವೇಶಿಸ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ. ಆದರೆ, ಈ ಕುರಿತು ಅಂತಿಮವಾಗಿ ಸರ್ಕಾರ ಮತ್ತು ರಾಜ್ಯಪಾಲರ ಮಟ್ಟದಲ್ಲಿ ಯಾವ ತೀರ್ಮಾನ ಹೊರಬೀಳಲಿದೆ ಎಂಬುದನ್ನ ಕಾದು ನೋಡಬೇಕಿದೆ. ಒಟ್ಟಿನಲ್ಲಿ ದೊಡ್ಮನೆ ಕುಟುಂಬದ ಹೆಣ್ಣುಮಗಳು ರಾಜಕೀಯ ರಂಗಕ್ಕೆ ಕಾಲಿಡುತ್ತಾರಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ ಅಂತಾನೆ ಹೇಳಬಹುದು.

About The Author