ಬರದ ಭೀತಿಯಿಂದ ಕಂಗಾಲಾಗಿರುವ ರೈತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕಳೆದ ವರ್ಷದ ಅತಿವೃಷ್ಟಿಯಿಂದ ಉಂಟಾದ ಬೆಳೆ ನಷ್ಟಕ್ಕೆ ಸಂಬಂಧಿಸಿದ ಅಂತಿಮ ಬೆಳೆ ವಿಮೆ ಪರಿಹಾರದ ಹಣ ಬಿಡುಗಡೆಗೊಂಡಿದ್ದು, ಮುಂದಿನ 10 ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆಯಾಗಲಿದೆ.
2025-26ನೇ ಸಾಲಿನಲ್ಲಿ ಮಧ್ಯಂತರ ಹಾಗೂ ಅಂತಿಮ ಪರಿಹಾರ ಸೇರಿ ಜಿಲ್ಲೆಗೆ ಒಟ್ಟು 464 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿದೆ. ಇದರ ಲಾಭವನ್ನು 3.01 ಲಕ್ಷ ರೈತರು ಪಡೆಯಲಿದ್ದಾರೆ. ಈ ಹಿಂದೆ ಮಧ್ಯಂತರ ಪರಿಹಾರವಾಗಿ 243.53 ಕೋಟಿ ರೂಪಾಯಿ ಬಿಡುಗಡೆಯಾಗಿದ್ದರೆ, ಇದೀಗ ಅಂತಿಮ ಕಂತಿನ 221 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಅಂತಿಮ ಪರಿಹಾರದಲ್ಲಿ ಉದ್ದು, ಸೋಯಾಬೀನ್, ಹೆಸರು ಹಾಗೂ ಹತ್ತಿ ಬೆಳೆಗಳಿಗೆ 31.77 ಕೋಟಿ ರೂಪಾಯಿ, ತೊಗರಿ ಬೆಳೆಗೆ 189.23 ಕೋಟಿ ರೂಪಾಯಿ ಮಂಜೂರಾಗಿದೆ.
ಕಳೆದ ವರ್ಷ ಮುಂಗಾರು ಪ್ರವಾಹ ಹಾಗೂ ಹಿಂಗಾರು ಅವಧಿಯ ಅತಿಯಾದ ಮಳೆಯಿಂದ ತೊಗರಿ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿದ್ದು, ಸುಮಾರು 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ದಾಖಲಾಗಿತ್ತು. ತೊಗರಿ ಬೆಳೆಯಲ್ಲಿ ಕಾಣಿಸಿಕೊಂಡ ಗೊಡ್ಡು ರೋಗವೂ ರೈತರಿಗೆ ಭಾರೀ ನಷ್ಟ ಉಂಟುಮಾಡಿತ್ತು.
ಸರ್ಕಾರ ಈಗಾಗಲೇ ಪರಿಹಾರದ ಮೊತ್ತವನ್ನು ವಿಮೆ ಕಂಪನಿಗೆ ಬಿಡುಗಡೆ ಮಾಡಿದ್ದು, ಪ್ರತಿ ರೈತನ ಬೆಳೆ ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಹಣದ ಲೆಕ್ಕಾಚಾರ ನಡೆಯುತ್ತಿದೆ. ಲೆಕ್ಕಪತ್ರ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಮುಂದಿನ ವಾರದಿಂದ ಹಂತ ಹಂತವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬೆಳೆ ಬೆಳೆಯುವ ಬಗ್ಗೆ ಆತಂಕದಲ್ಲಿರುವ ರೈತರಿಗೆ ಈ ವಿಮೆ ಪರಿಹಾರದ ಹಣ ಕೃಷಿ ಚಟುವಟಿಕೆಗಳಿಗೆ ನೆರವಾಗುವ ನಿರೀಕ್ಷೆಯಿದೆ. ಬೀಜ, ರಸಗೊಬ್ಬರ ಹಾಗೂ ಇತರ ಕೃಷಿ ವೆಚ್ಚಗಳನ್ನು ಭರಿಸಲು ಈ ಪರಿಹಾರ ಸ್ವಲ್ಪ ಮಟ್ಟಿನ ಆಸರೆಯಾಗಲಿದೆ. ಅತಿವೃಷ್ಟಿಯಿಂದಾದ ನಷ್ಟಕ್ಕೆ ಬಿಡುಗಡೆಯಾದ ಈ ಅಂತಿಮ ಬೆಳೆ ವಿಮೆ ಪರಿಹಾರವು ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ನೆಮ್ಮದಿ ನೀಡುವ ಜೊತೆಗೆ, ಹೊಸ ಬೆಳೆ ಹಂಗಾಮಿನ ಸಿದ್ಧತೆಗೆ ಸಹಕಾರಿಯಾಗಲಿದೆ.




