ರಾಜ್ಯ ರಾಜಕಾರಣದಲ್ಲಿ ಈಗ ಮತ್ತೆ ಸಚಿವ ಸಂಪುಟ ವಿಸ್ತರಣೆಯ ಕಾವು ಜೋರಾಗಿದೆ! ಈ ವಾರದಲ್ಲೇ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯಾಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿದ್ದಂತೆಯೇ, ಕಾಂಗ್ರೆಸ್ ನಾಯಕರ ದೆಹಲಿ ಓಡಾಟವೂ ಚುರುಕುಗೊಂಡಿದೆ. ಅದರ ನಡುವೆಯೇ ಈ ಬಾರಿಯ ಸಚಿವ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರದ್ದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಸಚಿವ ಸಂಪುಟ ವಿಸ್ತರಣೆಯ ಸುಳಿವು ಸಿಗುತ್ತಿದ್ದಂತೆಯೇ ರಾಜೇಂದ್ರ ರಾಜಣ್ಣ ದಿಢೀರ್ ದೆಹಲಿಗೆ ಹಾರಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಇವತ್ತು ಅಥವಾ ನಾಳೆ ಸಂಪುಟ ವಿಸ್ತರಣೆಯಾಗುವ ಬಗ್ಗೆ ಮಾಹಿತಿ ಇದೆ. ಈ ವಾರದಲ್ಲೇ ವಿಸ್ತರಣೆ ಆಗುವುದು ಖಚಿತ, ಹೀಗಾಗಿಯೇ ನಾನು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ಹೋಗುತ್ತಿದ್ದೇನೆ” ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅಷ್ಟಕ್ಕೂ ರಾಜೇಂದ್ರ ರಾಜಣ್ಣ ಅವರ ದೆಹಲಿ ಭೇಟಿಯ ಅಸಲಿ ಉದ್ದೇಶವೇನು ಗೊತ್ತಾ?
ತಮ್ಮ ಸಚಿವ ಸ್ಥಾನದ ಆಕಾಂಕ್ಷೆಯನ್ನು ಮುಚ್ಚಿಡದೆ ಸ್ಪಷ್ಟಪಡಿಸಿರುವ ಅವರು, “ಮೊದಲು ನನ್ನ ತಂದೆಯವರಿಗೆ ಮತ್ತೊಮ್ಮೆ ಸಚಿವ ಸ್ಥಾನದ ಅವಕಾಶ ನೀಡುವಂತೆ ಹೈಕಮಾಂಡ್ ಬಳಿ ಕೋರುತ್ತೇನೆ. ಒಂದು ವೇಳೆ ಅವರಿಗೆ ಸಾಧ್ಯವಾಗದಿದ್ದರೆ, ನನಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡುತ್ತೇನೆ” ಎಂದು ತಮ್ಮ ಬೇಡಿಕೆಯನ್ನು ತೆರೆದಿಟ್ಟಿದ್ದಾರೆ.
ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಸಿ. ವೇಣುಗೋಪಾಲ್ ಅವರನ್ನೂ ಭೇಟಿಯಾಗಲಿರುವ ರಾಜೇಂದ್ರ ರಾಜಣ್ಣ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಭ ಕೋರಿ, ತಮ್ಮ ಮನವಿಯನ್ನಿಡಲು ಪ್ಲಾನ್ ಮಾಡಿದ್ದಾರೆ ಎನ್ನುವ ಚರ್ಚೆ ಕೂಡ ಮತ್ತೊಂದು ಕಡೆ ಕೇಳಿಬರ್ತಿದೆ. ಹೈಕಮಾಂಡ್ ಅಂಗಳದಲ್ಲಿ ಸಚಿವ ಸ್ಥಾನಕ್ಕಾಗಿ ಕಸರತ್ತು ಶುರುವಾಗಿದ್ದು, ರಾಜೇಂದ್ರ ರಾಜಣ್ಣ ಅವರ ಈ ದೆಹಲಿ ಪ್ಲಾನ್ ವರ್ಕ್ ಔಟ್ ಆಗುತ್ತಾ ಇಲ್ಲವೇ ಕಾದು ನೋಡೋಣ..




