ಮಧ್ಯ ಭಾರತದ ರೈಲು ಸಂಪರ್ಕವನ್ನು ಬಲಪಡಿಸಲು ₹24,634 ಕೋಟಿ ರೂ. ಮೌಲ್ಯದ ನಾಲ್ಕು ಪ್ರಮುಖ ರೈಲು ಯೋಜನೆಗಳಿಗೆ ಇಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ಈ ಯೋಜನೆಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮತ್ತು ಛತ್ತೀಸ್‌ಗಢ ರಾಜ್ಯಗಳ 18 ಜಿಲ್ಲೆಗಳನ್ನು ಒಳಗೊಂಡಿವೆ. ಹೊಸ ಮೂರನೇ ಮತ್ತು ನಾಲ್ಕನೇ ಮಾರ್ಗಗಳ ನಿರ್ಮಾಣವು ವಾರ್ಧಾ–ಭುಸಾವಲ್ (314 ಕಿಮೀ), ಗೊಂಡಿಯಾ–ಡೊಂಗರ್‌ಗಢ (84 ಕಿಮೀ), ವಡೋದರಾ–ರತ್ಲಾಮ್ (259 ಕಿಮೀ) ಮತ್ತು ಇಟಾರ್ಸಿ–ಭೋಪಾಲ್–ಬಿನಾ (237 ಕಿಮೀ) ಮಾರ್ಗಗಳಲ್ಲಿ ನಡೆಯಲಿದೆ.
ಈ ಮಲ್ಟಿ-ಟ್ರ್ಯಾಕಿಂಗ್ ಯೋಜನೆಗಳು ಒಟ್ಟು 894 ಕಿಲೋಮೀಟರ್ ರೈಲು ಜಾಲವನ್ನು ಹೆಚ್ಚಿಸಲಿದ್ದು, ಸುಮಾರು 85.84 ಲಕ್ಷ ಜನಸಂಖ್ಯೆ ಮತ್ತು 3,600ಕ್ಕೂ ಹೆಚ್ಚು ಹಳ್ಳಿಗಳಿಗೆ ಲಾಭಕಾರಿಯಾಗಲಿದೆ. ಜೊತೆಗೆ ವಿದಿಶಾ ಮತ್ತು ರಾಜನಂದಗಾಂವ್ ಸೇರಿದಂತೆ ಎರಡು ಪ್ರಮುಖ ಜಿಲ್ಲೆಗಳಿಗೆ ನೇರ ಸಂಪರ್ಕ ಒದಗಿಸಲಾಗುತ್ತದೆ.
ಈ ಯೋಜನೆಗಳು ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನ ಭಾಗವಾಗಿದ್ದು, ಜನರು, ಸರಕುಗಳು ಮತ್ತು ಸೇವೆಗಳ ತಡೆರಹಿತ ಸಂಚಾರಕ್ಕೆ ಸಹಕಾರಿ ಆಗಲಿವೆ. ಸರ್ಕಾರದ ಪ್ರಕಾರ, ಈ ರೈಲು ಮಾರ್ಗಗಳು ಸಾಂಚಿ, ಸತ್ಪುರ ಹುಲಿ ಮೀಸಲು ಪ್ರದೇಶ, ಭಿಂಬೆಟ್ಕಾ ಶಿಲಾಶಿಲ್ಪಗಳು, ಹಜಾರ ಜಲಪಾತ ಮತ್ತು ನವೇಗಾಂವ್ ರಾಷ್ಟ್ರೀಯ ಉದ್ಯಾನವನ ಮುಂತಾದ ಪ್ರಮುಖ ಪ್ರವಾಸಿ ತಾಣಗಳಿಗೆ ಸುಲಭ ಸಂಪರ್ಕ ಒದಗಿಸಲಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ