ಭಾರತದ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ ಇದೀಗ ಹೊಸ ಹಂತಕ್ಕೆ ಕಾಲಿಡುತ್ತಿದೆ. ಅಕ್ಟೋಬರ್ 8ರಿಂದ ಫೇಸಿಯಲ್ ರೆಕಗ್ನಿಷನ್ ಹಾಗೂ ಫಿಂಗರ್‌ಪ್ರಿಂಟ್ ಆಧಾರಿತ ದೃಢೀಕರಣದ ಮೂಲಕ ಪಾವತಿ ಮಾಡುವ ಅವಕಾಶವನ್ನು ಭಾರತದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಹೊಸ ವೈಶಿಷ್ಟ್ಯವು ಆಧಾರ್ ವ್ಯವಸ್ಥೆಯಡಿ ಸಂಗ್ರಹಿಸಲಾದ ಬಯೋಮೆಟ್ರಿಕ್ ಡೇಟಾವನ್ನು ಬಳಸುತ್ತದೆ. ಅಂದರೆ, ಬಳಕೆದಾರರ ಮುಖ ಅಥವಾ ಬೆರಳಚ್ಚುಗಳ ಮೂಲಕ ನೇರವಾಗಿ ಪಾವತಿ ದೃಢೀಕರಣ ಸಾಧ್ಯವಾಗಲಿದೆ. ಇದು ಪ್ರಸ್ತುತ ಬಳಕೆಯಲ್ಲಿರುವ ಪಿನ್ ಸಂಖ್ಯೆ ಆಧಾರಿತ ವ್ಯವಸ್ಥೆಗೆ ಪರ್ಯಾಯವಾಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಇತ್ತೀಚಿನ ಮಾರ್ಗಸೂಚಿಗಳನ್ನು ಅನುಸರಿಸಿ, ಪಾವತಿಗಳಿಗೆ ಪರ್ಯಾಯ ದೃಢೀಕರಣ ವಿಧಾನಗಳನ್ನು ಅಳವಡಿಸಬೇಕೆಂಬ ಶಿಫಾರಸ್ಸಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಯುಪಿಐಯನ್ನು ನಿರ್ವಹಿಸುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್‌ಟೆಕ್ ಉತ್ಸವದಲ್ಲಿ ಈ ಹೊಸ ಬಯೋಮೆಟ್ರಿಕ್ ಪಾವತಿ ವೈಶಿಷ್ಟ್ಯವನ್ನು ಅಧಿಕೃತವಾಗಿ ಪ್ರದರ್ಶಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

