ಕೋಲ್ಕತ್ತಾ: ರಾಷ್ಟ್ರವ್ಯಾಪಿ ತೀವ್ರ ಸಂಚಲನ ಮೂಡಿಸಿರುವ 31 ವರ್ಷದ ತರಬೇತಿ ನಿರತ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಗೆದಷ್ಟು ಬೆಚ್ಚಿಬೀಳಿಸುವ ಅಂಶಗಳು ಬಯಲಾಗ್ತಿದ್ದು, ಇದೀಗ ಮರಣೋತ್ತರ ಪರೀಕ್ಷೆಯ ವರದಿ ಟ್ರೈನಿ ವೈದ್ಯೆ ಮೇಲೆ ನಡೆದ ಕ್ರೌರ್ಯವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಮೃತ ಟ್ರೈನಿ ವೈದ್ಯೆಯ ದೇಹದ ಮೇಲೆ 25 ಗಾಯಗಳು ಮತ್ತು ಆಂತರಿಕವಾಗಿ 16 ಗಾಯದ ಗುರುತುಗಳು ಪತ್ತೆಯಾಗಿವೆ ಅಂತ ಪೋಸ್ಟ್ ಮಾರ್ಟಂ ರಿಪೋರ್ಟ್ (post mortem report)ನಲ್ಲಿ ತಿಳಿಸಲಾಗಿದೆ.
ಆರ್.ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ 31 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಬಳಿಕ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ವಿದ್ಯಾರ್ಥಿನಿಯ ಜನನಾಂಗದಲ್ಲಿ ಬಲವಂತವಾಗಿ ಮಾಡಿರುವ ಗಾಯದ ಗುರುತುಗಳು ಪತ್ತೆಯಾಗಿದ್ದು, ಕೊಲೆ ಮತ್ತು ಅತ್ಯಾಚಾರ ಹಿಂದೆ ಒಂದಕ್ಕಿಂತ ಹೆಚ್ಚು ಆರೋಪಿಗಳು ಇರಬಹುದು ಎಂಬ ಮಾಹಿತಿ ತಿಳಿದುಬಂದಿದೆ. ಅಲ್ಲದೆ, ಟ್ರೈನಿ ವೈದ್ಯೆಯ ದೇಹದಲ್ಲಿ 151 ಗ್ರಾಂ ವೀರ್ಯ ಪತ್ತೆಯಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.
ತರಬೇತಿ ನಿರತ ವೈದ್ಯೆಯ ಹಣೆ, ಮೂಗು, ಗಲ್ಲ, ಕೆನ್ನೆಯ ಎಡ ಮಣಿಕಟ್ಟಿನ ಭಾಗ, ಬಲ ದವಡೆ, ಸ್ತನಗಳು, ಎಡಗಾಲಿನ ಪಾದ, ಯೋನಿ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಗಾಯಗಳು ಪತ್ತೆಯಾಗಿವೆ. ಎಡ ಕೆನ್ನೆ ಹಾಗೂ ಕುತ್ತಿಗೆ ಭಾಗದಲ್ಲಿ ಮೇಲೆ ಕಚ್ಚಿರುವ ಮತ್ತು ಪರಚಿರುವ ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ಪೋಸ್ಟ್ ಮಾರ್ಟಂ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಟ್ರೈನಿ ವೈದ್ಯೆಯ ಕೆಳ ತುಟಿಯಲ್ಲಿ ರಕ್ತಸ್ತಾವ ಆಗಿತ್ತು. ಇದರ ಜೊತೆಗೆ ಮತದೇಹ ಪತ್ತೆಯಾದ ಸಂದರ್ಭದಲ್ಲಿ ಯುವತಿಯ ಬಾಯಿ ಸ್ವಲ್ಪ ತೆಗೆದಿತ್ತು. ಬಾಯಿಯಲ್ಲಿ ಒಂದು ಹಲ್ಲು ಮುರಿದಿತ್ತು ಎಂಬ ಆಘಾತಕಾರಿ ಅಂಶಗಳು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಯಲಾಗಿದೆ.
ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಗೆ ರಾಷ್ಟ್ರವ್ಯಾಪಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಪಿ ಸಂಜಯ್ ರಾಯ್‌ನನ್ನು ಗಲ್ಲಿಗೇರಿಸುವಂತೆ ಆಗ್ರಹಗಳು ವ್ಯಕ್ತವಾಗುತ್ತಿವೆ. ಅಲ್ಲದೆ, ದೇಶಾದ್ಯಂತ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ.