ಬೆಂಗಳೂರು ನಗರದಲ್ಲಿ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. ಕೇಂದ್ರ ಸಚಿವ ವಿ. ಸೋಮಣ್ಣರ ಮನೆಯಲ್ಲೂ ಜಾತಿಗಣತಿ ಮಾಡಲಾಗಿದೆ. ಬೆಂಗಳೂರಿನ ವಿಜಯನಗರದ ಮನೆಯಲ್ಲಿ, ಗಣತಿದಾರರ ಎಲ್ಲಾ ಪ್ರಶ್ನೆಗಳಿಗೆ ವಿ. ಸೋಮಣ್ಣ ಉತ್ತರ ನೀಡಿದ್ದಾರೆ.
ಜೊತೆಗೆ ಸಾಲು ಸಾಲು ಪ್ರಶ್ನೆಗಳಿಗೆ ವಿ. ಸೋಮಣ್ಣ ಗರಂ ಆಗಿದ್ದು, ಗಣತಿದಾರರನ್ನೇ ತರಾಟೆ ತೆಗೆದುಕೊಂಡಿದ್ದಾರೆ. ಇಷ್ಟು ಪ್ರಶ್ನೆಗಳು ಬೇಕಿತ್ತಾ ಎಂದು ಪ್ರಶ್ನಿಸಿದ್ದು, ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಬಾರದೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀವ್ ಅಧಿಕಾರಿಗಳು ಏನ್ ಕೊಟ್ಟರೂ ಮಾಡುತ್ತೀರಲ್ವಾ?. ಮುಂದೆ ನಮ್ಮ ಕೇಂದ್ರ ಸರ್ಕಾರ ಯಾವ ರೀತಿ ಗಣತಿ ಮಾಡುತ್ತೆ ಎಂದು ನೋಡಿ. ಅದನ್ನೂ ನೀವೇ ಮಾಡೋದಲ್ವಾ. ಈ ಜಾತಿ ಸಮೀಕ್ಷೆ ಮಾಡುತ್ತಿರೋದು ವೋಟ್‌ಗಾಗಿ. ಇಷ್ಟೊಂದು ಪ್ರಶ್ನೆಗಳು ಬೇಕಾ?. ಇದನ್ನು ನೀವು ಸರ್ಕಾರಕ್ಕೆ ತಿಳಿಸಬೇಕಲ್ವಾ?.
ಸಿದ್ದರಾಮಯ್ಯ ಅವರಿಗೆ ಜಾತಿ ಲೆಕ್ಕ ಬೇಕು. ಅದಕ್ಕೆ ಇದನ್ನೆಲ್ಲಾ ಮಾಡ್ತಿದ್ದಾರೆ. ಸರ್ವೇ ಮಾಡೋಕೆ 9 ಜನ ಏಕೆ ಬಂದಿದ್ದೀರಿ ಎಂದು ಸಿಟ್ಟಾಗಿದ್ರು. ಇನ್ನು, ಉಪಜಾತಿ ಅಂತಾ ಕೇಳಿದಾಗ, ಅದೆಲ್ಲಾ ನಿಮಗೇಕೆ ಬೇಕು, ಸಿದ್ದರಾಮಯ್ಯ ಜಾತಿ ಎಂದು ಬರೆದುಕೊಳ್ಳುವಂತೆ ವಿ. ಸೋಮಣ್ಣ ಕಿಡಿಕಾರಿದ್ದಾರೆ.
ಇನ್ನು, ಮದ್ವೆ ಆದಾಗ ಎಷ್ಟು ವರ್ಷವಾಗಿತ್ತೆಂಬ ಪ್ರಶ್ನೆಗೆ, ಇವೆಲ್ಲ ಏಕೆ ಬೇಕು? ಇದೊಂದು ದುರಂತ. ಯಾರೋ ಅವಿವೇಕಿಗಳು ಹೇಳಿ ಮಾಡಿಸ್ತಿರೋದು. ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ, ಡಿಕೆಶಿ ಹೆಸರನ್ನೇ ಹಾಕಿಕೊಳ್ಳಿ. ಉತ್ತರ ಕೊಡದಕ್ಕೆ ಆಗದೆ ಇರುವ ಪ್ರಶ್ನೆಗಳನ್ನೆಲ್ಲಾ ಹಾಕಿದ್ದೀರಾ. ಯಾವನೋ ತಲೆ ಕೆಟ್ಟಿರೋರು ಮಾಡಿದ್ದು. ಅವನನ್ನ ಕರೀರಿ ಅಂತಾ ವಿ. ಸೋಮಣ್ಣ ಸಿಟ್ಟಾಗಿದ್ದಾರೆ.