ತಮ್ಮ ಮಕ್ಕಳನ್ನು ಉತ್ತಮ CBSE ಶಾಲೆಯಲ್ಲಿ ಓದಿಸಬೇಕು ಎಂಬ ಆಸೆ ಪ್ರತಿಯೊಬ್ಬ ಪೋಷಕರಿಗೂ ಇರುತ್ತದೆ. ಆದರೆ ಖಾಸಗಿ ಶಾಲೆಗಳ ದುಬಾರಿ ಶುಲ್ಕ ತೆರಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಇಂತಹ ಪೋಷಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ! ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 6 ರಿಂದ 12ನೇ ತರಗತಿಯವರೆಗೆ ವಸತಿ ಸಹಿತ ಸಂಪೂರ್ಣ ಉಚಿತ ಇಂಗ್ಲಿಷ್ ಮೀಡಿಯಂ CBSE ಶಿಕ್ಷಣ ನೀಡುವ ‘ಜವಾಹರ್ ನವೋದಯ ವಿದ್ಯಾಲಯ’ಗಳ (JNV) 6ನೇ ತರಗತಿ ಪ್ರವೇಶ ಪರೀಕ್ಷೆಗೆ (JNVST 2027) ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು? (ಅರ್ಹತೆಗಳು)
ತರಗತಿ: ವಿದ್ಯಾರ್ಥಿಯು ಪ್ರಸ್ತುತ (2026–27ನೇ ಸಾಲಿನಲ್ಲಿ) ಸರ್ಕಾರಿ ಅಥವಾ ಸರ್ಕಾರಿ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.
ವಯೋಮಿತಿ: ಮಗು 01-05-2015 ಮತ್ತು 31-07-2017ರ ನಡುವೆ ಜನಿಸಿರಬೇಕು.
ನಿವಾಸ: ವಿದ್ಯಾರ್ಥಿಯು ತಾನು ಪ್ರವೇಶ ಬಯಸುವ ನವೋದಯ ವಿದ್ಯಾಲಯವಿರುವ ಅದೇ ಜಿಲ್ಲೆಯ ನಿವಾಸಿಯಾಗಿರಬೇಕು ಹಾಗೂ ಅದೇ ಜಿಲ್ಲೆಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಗಮನಿಸಿ: ಈ ಹಿಂದೆ 5ನೇ ತರಗತಿ ಪಾಸಾದವರು ಅಥವಾ ಈಗಾಗಲೇ ಒಮ್ಮೆ ನವೋದಯ ಪರೀಕ್ಷೆ ಬರೆದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಂಪರ್ ಅವಕಾಶ!
ಪ್ರತಿ ನವೋದಯ ಶಾಲೆಯಲ್ಲಿ 80 ಸೀಟುಗಳಿರುತ್ತವೆ. ಇದರಲ್ಲಿ ಬರೋಬ್ಬರಿ ಶೇಕಡಾ 75 ರಷ್ಟು ಸೀಟುಗಳನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ. ಜೊತೆಗೆ, ಕನಿಷ್ಠ 1/3 ಭಾಗದಷ್ಟು ಸೀಟುಗಳು ಹೆಣ್ಣುಮಕ್ಕಳಿಗೆ ಕಾಯ್ದಿರಿಸಲ್ಪಟ್ಟಿರುತ್ತವೆ.
ಪರೀಕ್ಷಾ ಪದ್ಧತಿ ಹೇಗಿರುತ್ತೆ?
- ವಿಧಾನ: OMR ಶೀಟ್ ಆಧಾರಿತ 100 ಅಂಕಗಳ ಪರೀಕ್ಷೆ. ಒಟ್ಟು 80 ಬಹುಆಯ್ಕೆಯ (Objective) ಪ್ರಶ್ನೆಗಳಿರುತ್ತವೆ.
- ವಿಷಯಗಳು: ಮಾನಸಿಕ ಸಾಮರ್ಥ್ಯ, ಪರಿಸರ ಅಧ್ಯಯನ, ಗಣಿತ ಮತ್ತು ಭಾಷಾ ವಿಷಯಗಳಿಂದ ತಲಾ 20 ಪ್ರಶ್ನೆಗಳಿರುತ್ತವೆ.
- ಅಂಕಗಳು: ಪ್ರತಿ ಸರಿಯಾದ ಉತ್ತರಕ್ಕೆ 1.25 ಅಂಕ ಸಿಗಲಿದ್ದು, ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ.
ಸಮಯ: ಪರೀಕ್ಷೆಯು 2 ಗಂಟೆಗಳ ಕಾಲ ನಡೆಯುತ್ತದೆ.
ಪ್ರಮುಖ ದಿನಾಂಕಗಳು & ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಕೆ ಆರಂಭ: ಜುಲೈ 7, 2026
- ಅರ್ಜಿ ಸಲ್ಲಿಸಲು ಕೊನೆ ದಿನ: ಜುಲೈ 31, 2026
- ಪರೀಕ್ಷಾ ದಿನಾಂಕ: ನವೆಂಬರ್ 28, 2026
- ಅಗತ್ಯ ದಾಖಲೆಗಳು: ಮಗುವಿನ ಭಾವಚಿತ್ರ, ಸಹಿ, ಶಾಲಾ ಮುಖ್ಯಸ್ಥರ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರ.
ಆಸಕ್ತ ಪೋಷಕರು ಯಾವುದೇ ಶುಲ್ಕವಿಲ್ಲದೆ ಅಧಿಕೃತ ವೆಬ್ಸೈಟ್ cbseitms.rcil.gov.in/nvs ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಉಚಿತ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಈ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಬೇಡಿ.




