ಕೇಂದ್ರದ ₹1,323 ಕೋಟಿ ಹಣ ಗುಳುಂ; ಕಾಂಗ್ರೆಸ್ ಸರ್ಕಾರದ ಅಕ್ರಮ ಬಯಲು?

ಕೇಂದ್ರ ಸರ್ಕಾರ ನೀಡಿದ ವಿಶೇಷ ಅನುದಾನದಲ್ಲಿ ದುರ್ಬಳಕೆ ನಡೆದಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಡಿದ್ದಾರೆ. ರಾಜ್ಯ ಸರ್ಕಾರ ಸುಮಾರು 1,323 ಕೋಟಿ 96 ಲಕ್ಷ ರೂ. ಹಣವನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸಿದೆ ಎಂದು ಅವರು ದೂರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ನಿಗದಿತ ಉದ್ದೇಶಕ್ಕಷ್ಟೇ ಬಳಸಬೇಕು. ಅದನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಆದರೆ ಸಾವಿರ ಕೋಟಿ ರೂ. ಮೀರಿದ ಮೊತ್ತವನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಹಣ ಸದ್ಬಳಕೆ ಆಗದಿದ್ದರೂ ಬಳಕೆ ಪ್ರಮಾಣ ಪತ್ರ, ಯುಟಿಲೈಜೇಶನ್ ಸರ್ಟಿಫಿಕೇಟ್ ಕಳುಹಿಸುವ ಮೂಲಕ ಕೇಂದ್ರಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ವಿಚಾರದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ವಿಜಯೇಂದ್ರ ಆರೋಪಿಸಿದರು.

ನೂರಾರು ಕೋಟಿ ರೂ. ತೆಲಂಗಾಣಕ್ಕೆ ವರ್ಗಾವಣೆಯಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಹಣ ವರ್ಗಾವಣೆ ಮುಖ್ಯಮಂತ್ರಿಗಳ ಅನುಮತಿ ಇಲ್ಲದೆ ಸಾಧ್ಯವೇ ಇಲ್ಲ ಎಂದು ಪ್ರಶ್ನಿಸಿದರು. ಇದೇ ವೇಳೆ ಕೃಷ್ಣಭಾಗ್ಯ ಜಲನಿಗಮ ಕೂಡ ನಕಲಿ ಪ್ರಮಾಣ ಪತ್ರ ನೀಡಿರುವ ಆರೋಪದಲ್ಲಿ ಭಾಗಿಯಾಗಿದೆ ಎಂದು ವಿಜಯೇಂದ್ರ ದೂರಿದರು. ಈ ಸಂಬಂಧ ಸರ್ಕಾರ ಕೂಡಲೇ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಗೃಹಲಕ್ಷ್ಮಿ ಯೋಜನೆಗೆ ಮೀಸಲಿಟ್ಟಿದ್ದ ಸುಮಾರು 5,000 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ. ಇದು ಯಾವ ಇಲಾಖೆಗೆ ಹೋಗಿದೆ? ಇಲ್ಲಿ ಭ್ರಷ್ಟಾಚಾರ ನಡೆದಿದೆಯೇ? ಇದಕ್ಕೆ ಸಿಎಂ ಉತ್ತರ ನೀಡಲೇಬೇಕು ವಿಜಯೇಂದ್ರ ಆಗ್ರಹಿಸಿದ್ದಾರೆ. ಒಟ್ಟಾರೆ, ಕೇಂದ್ರ ಅನುದಾನ ಮತ್ತು ಕಲ್ಯಾಣ ಯೋಜನೆಗಳ ಹಣ ದುರ್ಬಳಕೆ ಕುರಿತು ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಎದುರುನೋಡಲಾಗುತ್ತಿದೆ.

ವರದಿ: ಲಾವಣ್ಯ ಅನಿಗೋಳ

About The Author