ಮಡುರೋ ಪದಚ್ಯುತಿಗೆ ₹25,000 ಕೋಟಿ ಬ್ಯಾರಲ್‌ ತೈಲ ಗಿಫ್ಟ್‌

ವೆನಿಜುವೆಲಾದ ಅಧ್ಯಕ್ಷ ನಿಕೋಲಸ್‌ ಮಡುರೋ ಅವರನ್ನ ಪದಚ್ಯುತಿಗೊಳಿಸಿದ್ದಕ್ಕೆ ಪ್ರತಿಯಾಗಿ, ವೆನಿಜುವೆಲಾ ಸರ್ಕಾರ ಅಮೆರಿಕಕ್ಕೆ 5 ಕೋಟಿ ಬ್ಯಾರಲ್‌ಗಳಷ್ಟು ಕಚ್ಚಾತೈಲವನ್ನು ನೀಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಈ ತೈಲದ ಒಟ್ಟು ಮೌಲ್ಯವು ಅಂದಾಜು ₹25,000 ಕೋಟಿ ಇರಲಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಅವರ ಈ ಹೇಳಿಕೆ ವೆನಿಜುವೆಲಾದಲ್ಲಿ ರಾಜಕೀಯ ಗೊಂದಲ ಉಂಟುಮಾಡಿದ್ದು, ಸಾರ್ವಭೌಮ ರಾಷ್ಟ್ರವೊಂದರ ಪ್ರಾಕೃತಿಕ ಸಂಪತ್ತನ್ನು ಈ ರೀತಿ ಒಪ್ಪಂದದ ಮೂಲಕ ವಶಪಡಿಸಿಕೊಳ್ಳುವುದು ಅಪಾಯಕಾರಿಯಾದ ಬೆಳವಣಿಗೆ ಎಂದು ಜಾಗತಿಕ ರಕ್ಷಣಾ ಮತ್ತು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಮಂಗಳವಾರ ಇಲ್ಲಿ ಮಾತನಾಡಿದ ಟ್ರಂಪ್‌, ವೆನಿಜುವೆಲಾದ ಮಧ್ಯಂತರ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ ಮಡುರೋ ಪದಚ್ಯುತಿ ಮಾಡಿದ ಪ್ರತಿಫಲವಾಗಿ ಆ ದೇಶ ಅಮೆರಿಕಕ್ಕೆ 5 ಕೋಟಿ ಬ್ಯಾರಲ್‌ ಕಚ್ಚಾತೈಲ ನೀಡಲಿದೆ. ಈ ತೈಲವನ್ನು ನಾವು ಸಂಸ್ಕರಿಸಲಿದ್ದೇವೆ. ಇದು ಅಮೆರಿಕದ ಆರ್ಥಿಕತೆಗೆ ಮತ್ತು ವೆನಿಜುವೆಲಾದ ಜನತೆಗೆ ಎರಡಕ್ಕೂ ಲಾಭದಾಯಕ ಎಂದು ಹೇಳಿದರು.

ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಟ್ರಂಪ್‌, ಈವರೆಗೆ ವೆನಿಜುವೆಲಾ ನಮ್ಮ ತೈಲವನ್ನು ಕಬಳಿಸಿತ್ತು. ಮಡುರೋ ಪದಚ್ಯುತಿಯಾದ ಬಳಿಕ ಅಮೆರಿಕ ಕಂಪನಿಗಳು ಅಲ್ಲಿ ಹೂಡಿಕೆ ಮಾಡಲಿವೆ. ನಮ್ಮ ಪಾಲಿನ ತೈಲವನ್ನು ನಾವು ವಶಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು. ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವ ಅಮೆರಿಕದ ಯಾವುದೇ ಯತ್ನ ನ್ಯಾಟೋ ಕೂಟವನ್ನೇ ನಾಶ ಮಾಡಬಹುದು ಎಂಬ ಡೆನ್ಮಾರ್ಕ್‌ ಹೇಳಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಅಮೆರಿಕ ಇಲ್ಲದಿದ್ದರೆ ನ್ಯಾಟೋ ಇಲ್ಲ ಎಂದು ಹೇಳಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author