ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ವರ್ಷ ಕಳೆದಿದೆ. ಆದ್ರೆ, ಕಳೆದ 1 ವರ್ಷದಲ್ಲಿ ಆ 10 ಪ್ರಕರಣಗಳು ರಾಜ್ಯ ಸರ್ಕಾರ ಅದ್ರಲ್ಲೂ ಗೃಹ ಸಚಿವ ಡಾ. ಜಿ.ಪರಮೇಶ್ವರ್ (Home Minister G Parameshwara) ಅವರ ಇಮೇಜ್ ಡ್ಯಾಮೇಜ್ ಆಗುವಂತೆ ಮಾಡಿಬಿಟ್ಟಿದೆ.
ಡಾ. ಜಿ.ಪರಮೇಶ್ವರ್ ಅವರು ಗೃಹ ಖಾತೆಯನ್ನು ವಹಿಸಿಕೊಂಡ ದಿನದಿಂದ ಹಿಡಿದು ಇಲ್ಲಿಯವರೆಗೂ ಒಂದಲ್ಲ ಒಂದು ಸವಾಲನ್ನು ಎದುರಿಸುತ್ತಲೇ ಇದ್ದಾರೆ. ಗೃಹ ಸಚಿವರಾದ ಮೇಲಂತೂ ಪರಮೇಶ್ವರ್ ಅವ್ರು ಪಟ್ಟ ಪಾಡು ಒಂದೆರಡಲ್ಲ. ಒಂದರ ಮೇಲೊಂದರಂತೆ ವಿವಾದಗಳು, ಎಡವಟ್ಟಿನ ಹೇಳಿಕೆಗಳು ಪರಮೇಶ್ವರ್ ಅವರನ್ನು ಇನ್ನಿಲ್ಲದಂತೆ ಕಾಡಿವೆ. ಈಗಲೂ ಕಾಡುತ್ತಿವೆ. ಹಾಗಾದರೆ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಸವಾಲು ತಂದಿಟ್ಟ ಆ 10 ಪ್ರಕರಣಗಳು ಯಾವುವು..? ಎಂಬ ಲಿಸ್ಟ್ ಇಲ್ಲಿದೆ..
ಕೇಸ್ ನಂ.01: ಜೈಲಲ್ಲಿ ದರ್ಶನ್ಗೆ ರಾಜಾತಿಥ್ಯ ನೀಡಿದ ಪ್ರಕರಣ:
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ಅವರು ಅರೆಸ್ಟ್ ಆದ ದಿನದಿಂದಲೂ ಕೇಳಿ ಬರುತ್ತಿವೆ. ಅದಕ್ಕೆ ಪೂರಕ ಎನ್ನುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಸಿಗರೇಟ್ ಸೇದುತ್ತಾ ರೌಡಿಶೀಟರ್ಗಳ ಜೊತೆ ಹರಟೆ ಹೊಡೆಯುವ ಫೋಟೋ ಹಾಗೂ ರೌಡಿಯೊಬ್ಬನ ಪುತ್ರನ ಜೊತೆ ದರ್ಶನ್ ವಿಡಿಯೋ ಕಾಲ್ನಲ್ಲಿ ಮಾತನಾಡಿರುವ ದೃಶ್ಯ ರಾಜ್ಯ ಸರ್ಕಾರದ ತಲೆ ಬಿಸಿ ಮಾಡಿದೆ. ಈ ಸರ್ಕಾರದಲ್ಲಿ ಹಣವಿದ್ದವರಿಗೆ ಒಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನು ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ..
ಕೇಸ್ ನಂ 02: ಎಚ್.ಡಿ.ರೇವಣ್ಣ, ಪ್ರಜ್ವಲ್ ರೇವಣ್ಣ ಪ್ರಕರಣ:
ಗೃಹ ಸಚಿವ ಪರಮೇಶ್ವರ್ ಅವರಿಗೆ ಭಾರಿ ಸವಾಲನ್ನೇ ತಂದಿಟ್ಟ ಪ್ರಕರಣ ಅಂದರೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು ರಕ್ಷಣೆ ಮಾಡುವ ಕೆಲಸವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಮುಂದುವರೆದ ಭಾಗವಾಗಿ ಪೆನ್ಡ್ರೈವ್ ರಿಲೀಸ್ ಆಗ್ತಿದ್ದಂತೆ ವಿದೇಶಕ್ಕೆ ತೆರಳಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರದಲ್ಲೂ ರಾಜ್ಯ ಸರ್ಕಾರದ ಕೆಲ ನಿರ್ಧಾರಗಳು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
ಕೇಸ್ ನಂ.03: ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ:
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣ ರಾಜ್ಯ ಸರ್ಕಾರಕ್ಕೆ ಭಾರಿ ಸವಾಲನ್ನೇ ತಂದೊಡ್ಡಿದೆ. ಎಸ್ಐಟಿ ತನಿಖೆ ಆರಂಭವಾಗುವ ಮೊದಲೇ ಡಿಸಿಎಂ, ಗೃಹ ಸಚಿವರು ಸೇರಿದಂತೆ ಕಾಂಗ್ರೆಸ್ ನಾಯಕರೆಲ್ಲಾ ಹಠಕ್ಕೆ ಬಿದ್ದವರಂತೆ ಮಾಜಿ ಸಚಿವ ನಾಗೇಂದ್ರ ಅವರ ಬೆನ್ನಿಗೆ ನಿಲ್ಲುವ ಕೆಲಸ ಮಾಡಿದರು. ಮಾತ್ರವಲ್ಲದೆ ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ ನಡೆದಿಲ್ಲ ಎನ್ನುವಂತೆ ಸಂಪುಟದ ಸಚಿವರು ಕ್ಲೀನ್ಚಿಟ್ ಕೊಟ್ಟರು. ಈ ಪ್ರಕರಣ ಕೂಡ ಗೃಹ ಸಚಿವ ಡಾ.ಪರಮೇಶ್ವರ್ ಅವರಿಗೆ ತಲೆಬೇನೆಯಾಗಿ ಪರಿಣಮಿಸಿತ್ತು.
ಕೇಸ್ ನಂ.04: ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಪ್ರಕರಣ:
ಹುಬ್ಬಳ್ಳಿಯ ಕಾಲೇಜಿನಲ್ಲಿ ಹಾಡಹಗಲೇ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸುವಂತಿತ್ತು. ಮೃತ ನೇಹಾ ಹಾಗೂ ಆರೋಪಿ ಫಯಾಜ್ ಪರಸ್ಪರ ಪ್ರೀತಿಸುತ್ತಿದ್ದರು ಎಂಬ ಗೃಹ ಸಚಿವರ ಹೇಳಿಕೆ ವಿದ್ಯಾರ್ಥಿನಿಯ ಕುಟುಂಬವನ್ನು ತಿರುಗಿ ಬೀಳುವಂತೆ ಮಾಡಿತು. ಅದರಲ್ಲೂ ಮೃತ ನೇಹಾ ತಂದೆ ಹಾಗೂ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ ಪಕ್ಷದ ನಾಯಕರ ವಿರುದ್ಧವೇ ಬಹಿರಂಗ ಹೇಳಿಕೆ ಕೊಟ್ಟಿದ್ದು ರಾಜ್ಯ ಸರ್ಕಾರಕ್ಕೆ ಭಾರಿ ಮುಜುಗರಕ್ಕೆ ಕಾರಣವಾಗಿತ್ತು.
ಕೇಸ್ ನಂ.05: ಹುಬ್ಬಳ್ಳಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣ:
ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಈ ಪ್ರಕರಣದ ಸಂಬಂಧ ಗೃಹ ಸಚಿವರು ಒಂದು ಹೇಳಿಕೆಯನ್ನು ನೀಡಿದ್ದರೆ ಅದಕ್ಕೆ ವಿರುದ್ಧವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರು ಕೊಟ್ಟ ಹೇಳಿಕೆಗಳು ಪರಮೇಶ್ವರ್ ಅವರ ಇಮೇಜ್ ಡ್ಯಾಮೇಜ್ ಆಗುವಂತೆ ಮಾಡಿತ್ತು.
ಕೇಸ್ ನಂ.06: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ:
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ರಾಜ್ಯ ಸರ್ಕಾರಕ್ಕೆ ಭಾರಿ ಸವಾಲನ್ನೇ ತಂದಿಟ್ಟಿತ್ತು. ಪ್ರಕರಣದ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಸಂಪುಟದ ಸಚಿವರುಗಳು ಕೊಟ್ಟಂತಹ ವಿಭಿನ್ನ ಹೇಳಿಕೆಗಳು ಗೊಂದಲ ಮೂಡುವಂತೆ ಮಾಡಿತ್ತು. ಸಿಸಿಬಿ ಹಾಗೂ ಎನ್ಐಎ ತನಿಖೆ ಕುರಿತ ಗೊಂದಲಕಾರಿ ಹೇಳಿಕೆಗಳು ಸಹಜವಾಗೇ ರಾಜ್ಯ ಸರ್ಕಾರವನ್ನು ಮುಜುಗರ ಅನುಭವಿಸುವಂತೆ ಮಾಡಿತ್ತು.
ಕೇಸ್ ನಂ.07: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ:
ರಾಜ್ಯಸಭೆ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣ ರಾಜ್ಯ ಸರ್ಕಾರಕ್ಕೆ ಭಾರಿ ಸಂಕಷ್ಟ ತಂದಿಟ್ಟಿತ್ತು. ಘಟನೆ ನಡೆದ ದಿನ ಗೃಹ ಸಚಿವ ಪರಮೇಶ್ವರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಾಂಗ್ರೆಸ್ ಸಚಿವರೆಲ್ಲಾ ಇದು ಫೇಕ್ ವಿಡಿಯೋ.. ವಿಜಯೋತ್ಸವ ಆಚರಣೆಯಲ್ಲಿ ಯಾರೂ ಪಾಕ್ ಪರ ಘೋಷಣೆ ಕೂಗಿಲ್ಲ.. ಇದು ನಕಲಿ ವಿಡಿಯೋ ಎಂದು ತನಿಖೆಗೂ ಮೊದಲೇ ಕ್ಲೀನ್ಚಿಟ್ ನೀಡಿದ್ದು ಭಾರಿ ವಿರೋಧಕ್ಕೆ ಕಾರಣವಾಗಿತ್ತು.
ಕೇಸ್ ನಂ.08: ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣ
ಹಾವೇರಿಯಲ್ಲೂ ನಡೆದ ಸಾಮೂಹಿಕ ಅತ್ಯಾಚಾರ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ದೂರು ಹಿಂಪಡೆಯುವಂತೆ ಅಪರಿಚಿತ ವ್ಯಕ್ತಿಗಳು ಒತ್ತರ ಹೇರುತ್ತಿದ್ದು, ಸಂತ್ರಸ್ತೆಗೆ ಹಣದ ಆಮಿಷ ಒಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಈ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.
ಕೇಸ್ ನಂ.09: ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ
ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ವಿಪಕ್ಷ ನಾಯಕರು ಹಾಗೂ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಕೇಸ್ ನಂ.10: ಉಡುಪಿ ಕಾಲೇಜಿನಲ್ಲಿ ವಿಡಿಯೋ ಪ್ರಕರಣ:
ಉಡುಪಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಪ್ರಕರಣ ರಾಜ್ಯ ಸರ್ಕಾರಕ್ಕೆ ತಲೆಬೇನೆಯಾಗಿ ಪರಿಣಮಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ನೀಡಿದ್ದ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಗೃಹ ಸಚಿವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸದಾಶಿವನಗರದಲ್ಲಿ ಪರಮೇಶ್ವರ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು.