ಯಾರ ವಿರೋಧಕ್ಕೂ ಜಗ್ಗದ ಸಿಎಂ ಸಿದ್ದರಾಮಯ್ಯ, ಜಾತಿಗಣತಿಗೆ ಆದೇಶ ಕೊಟ್ಟಿದ್ರು. ಸೆಪ್ಟೆಂಬರ್ 22ರಿಂದ ಸಮೀಕ್ಷೆ ಶುರುವಾಗಿದೆ. 4 ದಿನ ಕಳೆದರೂ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಜಾತಿಗಣತಿಗೆ ಮುಗಿಸಲು ಅಕ್ಟೋಬರ್ 7ರ ಡೆಡ್‌ಲೈನ್ ಕೊಡಲಾಗಿದೆ. ಆದ್ರೆ, ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷಗಳಿಂದಾಗಿ, ಸಮೀಕ್ಷೆಯ ವೇಗ ಕುಂಠಿತವಾಗುತ್ತದೆ. ಶಿಕ್ಷಕರು ಗಣತಿ ವೇಳೆ ಪರದಾಡುವಂತಾಗಿದೆ.
ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಸ್ವತಃ ಸಿಎಂ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿದ್ದಾರೆ. ಇಂದು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ, ಸಮೀಕ್ಷೆಗೆ ವೇಗ ನೀಡಲು ಮುಂದಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಗಳ ಸಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.
ಸೆಪ್ಟೆಂಬರ್ 25ರ ಗುರುವಾರ ನಡೆದ ಸಂಪುಟ ಸಭೆಯಲ್ಲಿ, ಜಾತಿಗಣತಿಯಲ್ಲಿ ಉಂಟಾಗುತ್ತಿರುವ ಲೋಪಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ಸಮೀಕ್ಷೆಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಖುದ್ದು ಮುಖ್ಯಮಂತ್ರಿಗಳೇ ಸಭೆ ನಡೆಸುವ ಕುರಿತು ನಿರ್ಧಾರ ಕೈಗೊಂಡಿದ್ದಾರೆ. ಇದೇ ವೇಳೆ ಸಮೀಕ್ಷಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ, ಶಿಸ್ತು ಕ್ರಮ ಕೈಗೊಳ್ಳಲು ಒಪ್ಪಿಗೆ ಸಿಕ್ಕಿದೆ.

