ಬೀದಿ ನಾಯಿಗಳ ಶಸ್ತ್ರಚಿಕಿತ್ಸೆಗೆ ವಾರ್ಷಿಕ 2 ಕೋಟಿ ವೆಚ್ಚ: ಸಕ್ಸಸ್ ಆಗುತ್ತಾ ಸಂತಾನಶಕ್ತಿ ಹರಣ ಚಿಕಿತ್ಸೆ..?

Hubli News: ಹುಬ್ಬಳ್ಳಿ: ಬೀದಿ ನಾಯಿಗಳಿಂದ ಅವಳಿನಗರದ ಜನರು ಬೇಸತ್ತು ಹೋಗಿದ್ದಾರೆ. ಇಷ್ಟುದಿನ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದ ಪಾಲಿಕೆ ಈಗ ಜವಾಬ್ದಾರಿತನ ತೋರಿಸಲು ಮುಂದಾಗಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅವುಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಯೇ ಉಳಿದಿರುವ ಮಾರ್ಗ ಎಂಬುವುದನ್ನು ಅರ್ಥ ಮಾಡಿಕೊಂಡಿದ್ದು, ಶಸ್ತ್ರಚಿಕಿತ್ಸೆ ಪ್ರಮಾಣವನ್ನು ಮೂರುಪಟ್ಟು ಹೆಚ್ಚಿಸಲು ಮುಂದಾಗಿದೆ.

ಈಗ ಚಾಲ್ತಿಯಲ್ಲಿರುವ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಸಾಲಿನಲ್ಲಿ ಶಸ್ತ್ರಚಿಕಿತ್ಸೆಯ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ನಿರ್ಧರಿಸಿದೆ. ಹೌದು.. ಸದ್ಯ ಧಾರವಾಡ ತಾಲೂಕು ಸಲಕಿನಕೊಪ್ಪದಲ್ಲಿ ಬೆಂಗಳೂರಿನ ಕೇರ್ ಆಫ್ ವೈಸ್‌ಲೈಸ್ ಆ್ಯನಿಮಲ್ಸ್ ಟ್ರಸ್ಟ್ ನವರು 2024-25 ಸಾಲಿನಿಂದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ. ಇದರ ಹೊರತಾಗಿ ಶಿವಳ್ಳಿ ಗ್ರಾಮದಲ್ಲಿ ಪಾಲಿಕೆ ಒಡೆತನದ ಜಾಗದಲ್ಲಿ ಸಂತಾನಶಕ್ತಿ ಹರಣ ಕೇಂದ್ರ ಸ್ಥಾಪಿಸಲಾಗುತ್ತಿದೆ. ಇಲ್ಲಿ ವರ್ಷಕ್ಕೆ 12 ಸಾವಿರ ಶಸ್ತ್ರಚಿಕಿತ್ಸೆ ನಡೆಸುವ ಗುರಿ ಹೊಂದಲಾಗಿದೆ. ಇದರಿಂದ ವರ್ಷಕ್ಕೆ 17ರಿಂದ 18 ಸಾವಿರ ಬೀದಿ ನಾಯಿಗಳು ಶಸ್ತ್ರಚಿಕಿತ್ಸೆಗೆ ಒಳಪಟ್ಟು ಅವುಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಬರಬಹುದೆಂದು ನಿರೀಕ್ಷಿಸಲಾಗಿದೆ.

ಇನ್ನೂ ಶಿವಳ್ಳಿಯಲ್ಲಿ 92 ಲಕ್ಷ ರೂ. ವೆಚ್ಚದಲ್ಲಿ ಸಂತಾನಶಕ್ತಿ ಹರಣ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಇಲ್ಲಿ 2 ಶಸ್ತ್ರಚಿಕಿತ್ಸೆ ಕೊಠಡಿ ಇರಲಿದೆ. ಇದರಿಂದ ನಿತ್ಯ 30-40 ಬೀದಿ ನಾಯಿಗಳ ಶಸ್ತ್ರಚಿಕಿತ್ಸೆ ನಡೆಸಬಹುದು. ಏಕ ಕಾಲಕ್ಕೆ 200 ನಾಯಿಗಳನ್ನು (ಶಸ್ತ್ರ ಚಿಕಿತ್ಸೆ ತಂದಿರುವ ಹಾಗೂ ಶಸ್ತ್ರಚಿಕಿತ್ಸೆಗೆ ಒಳಪಟ್ಟ) ಕೂಡಿಡುವ ವ್ಯವಸ್ಥೆ ಮಾಡಲಾಗಿದೆ.

ಒಟ್ಟಿನಲ್ಲಿ ವಾರ್ಷಿಕವಾಗಿ ಎರಡು ಕೋಟಿ ಖರ್ಚು ಮಾಡಲು ಪಾಲಿಕೆ ನಿರ್ಧಾರ ಮಾಡಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರೂ ಕೂಡ ವ್ಯವಸ್ಥಿತ ಕಾರ್ಯಾಚರಣೆ ಮೂಲಕ ಜನರ ಭವಣೆ ನೀಗಿಸುವ ಕಾರ್ಯವಾಗಬೇಕಿದೆ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author