ಇನ್ಮುಂದೆ ದಿನನಿತ್ಯ 2 ತಾಸು ಮೊಬೈಲ್ ಬಂದ್‌, ಬಂದ್‌

ಹಲಗಾ ಗ್ರಾಮದ ನಂತರ ಬೆಳಗಾವಿ ಜಿಲ್ಲೆಯ ಮತ್ತೊಂದು ಹಳ್ಳಿ ಡಿಜಿಟಲ್ ಸ್ಟೀನ್ ರಹಿತ ಅವಧಿ ಪಾಲನೆಗೆ ಮುಂದಾಗಿದೆ. ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಪ್ರತಿದಿನ ಸಂಜೆ 6ರಿಂದ 8 ಗಂಟೆಯವರೆಗೆ ಟಿವಿ ವೀಕ್ಷಣೆ ಮತ್ತು ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸಂಬಂಧ ಕಪ್ಪಲಗುದ್ದಿ ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಾತೃ-ಪಿತೃ ವಂದನಾ ಕಾರ್ಯಕ್ರಮದಲ್ಲಿ ಪಾಲಕರು ಮಕ್ಕಳ ತಲೆಯ ಮೇಲೆ ಕೈ ಇಟ್ಟು, ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಯಲಿರುವ SSLC ಹಾಗೂ PUC ಪರೀಕ್ಷೆಗಳ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಈ ವಿನೂತನ ಪ್ರಯೋಗವನ್ನು ಯಶಸ್ವಿಗೊಳಿಸಲು ಸ್ಥಳೀಯ ಗ್ರಾಮ ಪಂಚಾಯಿತಿಯೂ ಕೈಜೋಡಿಸಿದ್ದು, ‘ಮಕ್ಕಳ ಓದಿಗಾಗಿ ಪಾಲಕರ ನಿರ್ಣಯ’ ಎಂಬ ಶೀರ್ಷಿಕೆಯಡಿಯಲ್ಲಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅಧಿಕೃತ ಠರಾವು ಪಾಸು ಮಾಡಲಾಗಿದೆ. ಜೊತೆಗೆ ಈ ನಿರ್ಧಾರವನ್ನು ಗ್ರಾಮದಲ್ಲಿ ಡಂಗುರ ಸಾರುವ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗಿದೆ.

ಜನವರಿ 12ರಂದು ಈ ನಿರ್ಧಾರವನ್ನು ಅಧಿಕೃತವಾಗಿ ಅನುಷ್ಠಾನಗೊಳಿಸಿರುವುದು ವಿಶೇಷವಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಪಾಲಕರು ಒಗ್ಗಟ್ಟಾಗಿ ಕೈಗೊಂಡಿರುವ ಈ ಸಾಮಾಜಿಕ ಪ್ರಯೋಗಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರತಿದಿನ ಎರಡು ಗಂಟೆಗಳ ಕಾಲ ಗ್ರಾಮದ ಎಲ್ಲ ಕುಟುಂಬಗಳು ಮೊಬೈಲ್ ಹಾಗೂ ಟಿವಿಯಿಂದ ದೂರವಿದ್ದು ಮಕ್ಕಳ ಓದಿಗೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟುಗೌಡಾ ನಾಯಿಕ ಅವರು ಮಾಹಿತಿ ನೀಡಿದ್ದು, ಗ್ರಾಮದಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

About The Author