Tuesday, April 15, 2025

Latest Posts

ಹಳೇ ಮೈಸೂರಲ್ಲಿ ಕೈ-ದಳದ ವಿರುದ್ಧ ಸೆಣಸಾಡಲು ಬಿಜೆಪಿಗೆ ಈ ನಾಲ್ವರ ಬೆಂಬಲ ಬೇಕೇಬೇಕು…!

- Advertisement -

www.karnatakatv.net :ಬೆಂಗಳೂರು : 2023ರ ಚುನಾವಣೆಗೆ ಬಿಜೆಪಿ ಸಂಪೂರ್ಣ ಬಹುಮತದ ಗೆಲುವಿಗೆ ಈಗಿನಿಂದಲೇ ರಣ ತಂತ್ರ ರೂಪಿಸ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಪ್ರಾಬಲ್ಯವಿರೋ ಹಳೆ ಮೈಸೂರು ಭಾಗಗಳಲ್ಲಿ ಬಲವರ್ಧನೆಗೆ ಕಮಲ ಮುಂದಾಗಿದೆ.

ಬಿಜೆಪಿಗೆ ಮುಂದಿನ 2023ರ ಚುನಾವಣೆಗೆ ಹೆಚ್ಚು ಮಹತ್ವ ನೀಡ್ತಿದೆ.  ಹೀಗಾಗಿ ರಾಜ್ಯಾದ್ಯಂತ ಬಿಜೆಪಿ ನಾಯಕರು ಕಾರ್ಯಕರ್ತರು, ಮುಖಂಡರ ಜೊತೆ ಚುನಾವಣೆ ಎದುರಿಸೋ ನಿಟ್ಟಿನಲ್ಲಿ ಚರ್ಚೆ ನಡೆಸ್ತಿದ್ದಾರೆ.  ಮೈಸೂರು, ಮಂಡ್ಯ, ಬೆಂಗಳೂರು, ಚಾಮರಾಜನಗರ, ರಾಮನಗರ, ಚನ್ನಪಟ್ಟಣ, ಹಾಸನದಲ್ಲಿ ಬಿಜೆಪಿ ಸಂಪೂರ್ಣವಾಗಿ ವಶ ಮಾಡಿಕೊಳ್ಳೋದಕ್ಕೆ ಕಸರತ್ತು ನಡೆಸ್ತಿದೆ.

ಇನ್ನು  ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯೋದಕ್ಕೆ ಹಳೇ ಮೈಸೂರು ಭಾಗ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ . ಹೀಗಾಗಿಯೇ ಈ ಪ್ರದೇಶಗಳಲ್ಲೇ ನಾವು ಈ ಬಾರಿ ಗೆದ್ದು ತೋರಿಸ್ತೀವಿ ಅಂತ ಬಿಜೆಪಿ ಟೊಂಕ ಕಟ್ಟಿ ನಿಂತಿದೆ.

ಈ ದೃಷ್ಟಿಯಿಂದಾಗಿ ದಲಿತ ಸಮುದಾಯದವರಿಗೆ ಆದ್ಯತೆ ನೀಡ್ತಿವಿ ಅಂತ ಕೊಳ್ಳೇಗಾಲ ಶಾಸಕ ಎನ್, ಮಹೇಶ್ ರನ್ನ ಬಿಜೆಪಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದ್ರೆ ಇದರ ಹಿಂದಿನ ಬಿಜೆಪಿಯ ರಾಜಕೀಯ ಲೆಕ್ಕಾಚಾರವೇ ಬೇರೆ. ಹೌದು, ಮಾಜಿ ಸಿಎಂ ಬಿಎಸ್ ವೈ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರೋ ವಿಜಯೇಂದ್ರ ರಾಜಕೀಯ ಭವಿಷ್ಯದ ಉದ್ದೇಶದಿಂದ ಬಿಜೆಪಿ ದಲಿತ ಅಭ್ಯರ್ಥಿ ಎನ್.ಮಹೇಶ್ ರನ್ನ ಬಿಜೆಪಿ ಸೇರಿಸಿಕೊಂಡಿದೆ. ಇನ್ನು ಮುಂಬರೋ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸೋಕೆ ಈಗಾಗಲೇ ಸಿದ್ಧತೆ ನಡೆಸಲಾಗ್ತಿದೆ. ಅಲ್ಲಿನ ದಲಿತ ಸಮುದಾಯದ ಮತ ಸೆಳೆಯೋ ಉದ್ದೇಶದಿಂದ ಬಿಜೆಪಿ ಮಹೇಶ್ ರನ್ನ ಸೇರಿಸಿಕೊಂಡಿದೆ. ಇನ್ನು ವಿಜಯೇಂದ್ರ ಈಗಾಗಲೇ ದಂಡಯಾತ್ರೆ ಶುರುಮಾಡಿದ್ದಾರೆ. ಆದ್ರೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸೋದಕ್ಕೆ ರಾಮದಾಸ್ ಗೆ ಪ್ರಾಮುಖ್ಯತೆ ನೀಡೋ ಅಗತ್ಯವಿದೆ. ಆದ್ರೆ ಸಚಿವ ಸಂಪುಟದಲ್ಲಿ ಸ್ಥಾನ ನೀಡೋ ವಿಚಾರದಲ್ಲಿ ಬಿಜೆಪಿ, ಶಾಸಕ ರಾಮದಾಸ್ ರನ್ನು ಕಡೆಗಣಿಸಿದೆ.

ಇನ್ನು ಅದೇ ರೀತಿ ರಾಮನಗರ ಭಾಗದಲ್ಲಿ ಸೈನಿಕ ಸಿ.ಪಿ ಯೋಗೀಶ್ವರ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ರೆ ಅಲ್ಲಿ ಬಿಜೆಪಿ ಬಹುಮತ ನಿರೀಕ್ಷಿಸಬಹುದು. ಆದ್ರೆ ರಾಮನಗರದಲ್ಲಿ ಬಿಜೆಪಿ ರಾಜಕೀಯ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾದರೆ ಅಲ್ಲಿ ರಾಜಕೀಯ ಎದುರಾಳಿಗಳಾಗಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ವಿರುದ್ಧ ಹೋರಾಡಬೇಕು.  ಇದಕ್ಕೆ ಬಿಜೆಪಿ  ನಾಯಕ ಯೋಗೀಶ್ವರ್ ಗೆ ಹೆಚ್ಚಿನ ಬೆಂಬಲ ನೀಡಬೇಕಿರೋ ಅನಿವಾರ್ಯತೆ ಇದೆ. ಆದ್ರೆ ರಾಜ್ಯ ಬಿಜೆಪಿ ಸರ್ಕಾರ ತನ್ನ ಸಚಿವ ಸಂಪುಟದಲ್ಲೇ ಸ್ಥಾನ ಕೊಡದೆ ಮೂಲೆಗುಂಪು ಸೇರಿಸಿದೆ. ಇದು ಸಹಜವಾಗಿಯೇ ವಿಪಕ್ಷಗಳಿಗೆ ಪ್ಲಸ್ ಪಾಯಿಂಟ್ ಆಗಲಿದೆ.

ಇನ್ನು ಮಾಜಿ ಪ್ರಧಾನಿ ದೇವೇಗೌಡರ ಪ್ರಾಬಲ್ಯವಿರೋ ಹಾಸನದಲ್ಲಿ 2018ರ ಉಪಚುನಾವಣೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಯ್ತು. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಜಯಭೇರಿ ಬಾರಿಸೋ ಮೂಲಕ ಎರಡು ದಶಕಗಳಿಂದ ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನವನ್ನ ವಶಪಡಿಸಿಕೊಂಡ್ರು. ಹೀಗಾಗಿ ಇಲ್ಲಿ ಬಿಜೆಪಿ ನಿಧಾನವಾಗಿ ಪ್ರಾಬಲ್ಯ ಸಾಧಿಸೋದಕ್ಕ ಸ್ಕೆಚ್ ಹಾಕ್ತಿದೆ. ಆದ್ರೆ ಶಾಸಕ ಪ್ರೀತಂ ಗೌಡಗೂ ಕೂಡ ಪಕ್ಷದಲ್ಲಿ ಹೆಚ್ಚಿನ ಮಹತ್ವಕೊಡದ ಹೊರತು ಹಾಸನದಲ್ಲಿ ಮತ್ತೆ ಕಮಲ ಅರಳೋದಕ್ಕೆ ತೊಡಕಾಗಬಹುದು,

ಒಟ್ಟಾರೆ ಈ ಬಾರಿ ರಾಜ್ಯವನ್ನು ಕೇಸರಿಮಯಗೊಳಿಸೋ ಧ್ಯೇಯವಿಟ್ಟಿಕೊಂಡಿರೋದ್ರಿಂದ ಈಗಾಗಲೇ ಹೈಕಮಾಂಡ್ ನಲ್ಲಿ ಕರ್ನಾಟಕ ರಾಜಕೀಯ ಕುರಿತಾದ ಚರ್ಚೆಗಳು ನಡೀತಿದೆ.  ಆದ್ರೆ ಕೋವಿಡ್ ಸೇರಿದಂತೆ ಮತ್ತಿತರ ಸಮಸ್ಯೆಗಳಿಂದ ಬೇಸತ್ತಿರೋ ರಾಜ್ಯದ ಜನತೆ ಮುಂದೆಯೂ ಬಿಜೆಪಿಯನ್ನ ಬೆಂಬಲಿಸ್ತಾರಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

ಕರ್ನಾಟಕ ಟಿವಿ – ಬೆಂಗಳೂರು

- Advertisement -

Latest Posts

Don't Miss