22 ಮಂದಿಯ ಸಜೀವ ದಹನ. ಕರ್ನೂಲ್ ಬಸ್ ದುರಂತಕ್ಕೆ ಬೈಕ್ ಸವಾರನ ಯಡವಟ್ಟೇ ಕಾರಣ ಅನ್ನೋದು ಮತ್ತೊಮ್ಮೆ ದೃಢಪಟ್ಟಿದೆ. ರಾಂಗ್ ರೂಟ್‌ನಲ್ಲಿ ಬಂದು ಬಸ್‌ಗೆ ಡಿಕ್ಕಿಯೊಡೆದಿದ್ದ ಬೈಕರ್, ಕುಡಿದು ಬೈಕ್ ರೈಡ್ ಮಾಡಿದ್ದು ಪತ್ತೆಯಾಗಿದೆ. ದುರಂತಕ್ಕೂ ಮುನ್ನ ಪೆಟ್ರೋಲ್ ಬಂಕ್‌ವೊಂದಕ್ಕೆ ಹೋಗಿದ್ದ ಶಿವಶಂಕರ್, ಕುಡಿದುಕೊಂಡು ಹೋಗಿರುವುದು ಪತ್ತೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಶಿವಶಂಕರ್ ವಿಡಿಯೋವೊಂದು ವೈರಲ್ ಆಗಿದೆ. ಮಧ್ಯರಾತ್ರಿ 2.23ರ ಸುಮಾರಿಗೆ ಮತ್ತೊಬ್ಬ ಯುವಕನ ಜೊತೆ, ಶಿವಶಂಕರ್ ಬರ್ತಾನೆ. ಆ ವೇಳೆ ಪೆಟ್ರೋಲ್ ಹಾಕುವವರೂ ಯಾರು ಇರಲಿಲ್ಲ. ಮೊದಲು ಜೋರಾಗಿ ಕೂಗ್ತಾನೆ. ಬಳಿಕ ಬೈಕ್ ಅನ್ನ ಅಲ್ಲೇ ನಿಲ್ಲಿಸಿ, ಆ ಯುವಕನನ್ನ ಕರೆದುಕೊಂಡು ಎಲ್ಲೋ ಹೋಗ್ತಾನೆ.
ವಾಪಸ್ ಒಬ್ಬನೇ ತೂರಾಡುತ್ತಾ ಬರ್ತಾನೆ. ಬೈಕ್ ಅನ್ನ ಒಂದು ಕೈಯ್ಯಲ್ಲೇ ಧರಧರನೇ ರಸ್ತೆ ಕಡೆ ತಿರುಗಿಸಿಕೊಂಡು, ಬೈಕ್ ಹತ್ತಿ ಹೊರಟು ಹೋಗ್ತಾನೆ. ಆ ವೇಳೆಯೂ ಬೈಕ್ ಸ್ಕಿಡ್ ಆಗಿ ಕೆಳಗೆ ಬೀಳಬೇಕಿತ್ತು. ಆದ್ರೆ, ಅದೃಷ್ಟ ನೆಟ್ಟಗಿತ್ತು ಅನ್ಸುತ್ತೆ. ಹಾಗೆಯೇ ಸಾವರಿಸಿಕೊಂಡು ಹೋಗಿಬಿಡ್ತಾನೆ. ಶಿವಶಂಕರ್ ವಿಚಿತ್ರ ನಡವಳಿಕೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದಾದ ಅರ್ಧ ಗಂಟೆಯಲ್ಲಿ ಕರ್ನೂಲ್ ಬಳಿ ಬಸ್ ದುರಂತ ಸಂಭವಿಸಿದೆ. ಕೇವಲ 40 ನಿಮಿಷಗಳಲ್ಲಿ 20 ಮಂದಿ ಸಜೀವ ದಹನವಾಗಿದ್ರು. ಪ್ರಯಾಣಿಕರ ಜೊತೆಗೆ ಬೈಕರ್ ಶಿವಶಂಕರ್ ಕೂಡ ಬಲಿಯಾಗಿದ್ದಾನೆ. ಈತ ಕುಡಿದು ಬೈಕ್ ರೈಡ್ ಮಾಡಿದ್ದು, ಅತೀ ವೇಗದ ಚಾಲನೆ ಮತ್ತು ರಾಂಗ್ ರೂಟ್‌ನಲ್ಲಿ ಬಂದಿದ್ದೇ ದುರಂತಕ್ಕೆ ಕಾರಣ ಅನ್ನೋದಕ್ಕೆ, ಈ ವಿಡಿಯೋಗಿಂತ ದೊಡ್ಡ ಸಾಕ್ಷಿ ಬೇಕಿಲ್ಲ ಅನ್ಸುತ್ತೆ.
ಡ್ರಿಂಕ್ ಅಂಡ್ ಡ್ರೈವ್ ನಿಷೇಧವಿದ್ರೂ, ಕುಡಿದು ವಾಹನ ಚಲಾಯಿಸೋದು ಮಾತ್ರ ದೇಶದಲ್ಲಿ ಇನ್ನೂ ನಿಂತಿಲ್ಲ. ಮತ್ತೊಂದು ಪ್ರಮುಖ ವಿಷ್ಯ ಅಂದ್ರೆ, ಆಂಧ್ರಪ್ರದೇಶ ಅಗ್ನಿಶಾಮಕ ಸೇವೆಗಳ ಇಲಾಖೆಯ ಮಹಾನಿರ್ದೇಶಕ ಪಿ. ವೆಂಕಟರಾಮನ್ ಹೇಳುವಂತೆ, ಸ್ಮಾರ್ಟ್‌ಫೋನ್‌ಗಳ ಸ್ಫೋಟದ ಜೊತೆಗೆ, ಬಸ್‌ನ ಹವಾನಿಯಂತ್ರಣ ವ್ಯವಸ್ಥೆಗೆ ಬಳಸಲಾದ ವಿದ್ಯುತ್ ಬ್ಯಾಟರಿಗಳು ಸಹ ಸಿಡಿದಿವೆ. ಪರಿಣಾಮ, ಶಾಖವು ತುಂಬಾ ತೀವ್ರಗೊಂಡಿದ್ದು, ಬಸ್‌ನ ತಳಕ್ಕೆ ಹಾಸಲಾಗಿದ್ದ ಅಲ್ಯೂಮಿನಿಯಂ ಪದರಗಳು ಕರಗಿಹೋಗಿವೆ ಎಂದು ಹೇಳಿದ್ದಾರೆ.
ಬೈಕ್‌ಗೆ ಬಸ್ ಡಿಕ್ಕಿ ಹೊಡೆದಾಗ, ಬಸ್‌ನ ಕೆಳಗೆ ಬೈಕ್ ಸಿಕ್ಕಿಕೊಂಡಿದೆ. ಈ ವೇಳೆ, ಇಂಧನ ಸರಬರಾಜು ಪೈಪ್‌ಗೆ ಹಾನಿಯಾಗಿದ್ದು, ಡೀಸೆಲ್ ಚಿಮ್ಮಲು ಆರಂಭಿಸಿದೆ. ಬೆಂಕಿ ಕಿಡಿ ಡೀಸೆಲ್‌ಗೆ ತಗುಲಿದ್ದು, ಬಸ್ ಮುಂಭಾಗಕ್ಕೆ ಮೊದಲು ಬೆಂಕಿ ಹೊತ್ತಿಕೊಂಡಿದೆ. ಬಳಿಕ, ಇಡೀ ಬಸ್‌ಗೆ ಬೆಂಕಿ ವ್ಯಾಪಿಸಿದೆ ಎಂದು ಹೇಳಿದ್ದಾರೆ. ಒಟ್ನಲ್ಲಿ ಯಾರೂ ಊಹಿಸದಂತಹ ಘನಘೋರ ದುರಂತವೊಂದು ನಡೆದುಹೋಗಿದೆ. ಅಮಾಯಕ 20 ಪ್ರಾಣಗಳು ಬಲಿಯಾಗಿವೆ.ಇನ್ನು, ಖಾಸಗಿ ಬಸ್‌ನ ಇಬ್ಬರು ಚಾಲಕರ ವಿರುದ್ಧ ನಿರ್ಲಕ್ಷ್ಯ ಮತ್ತು ಅತಿವೇಗದ ಪ್ರಕರಣ ದಾಖಲಿಸಲಾಗಿದೆ. ಕರ್ನೂಲ್ ಬಸ್ ದುರಂತಕ್ಕೆ ಬೈಕರ್ ಶಿವಶಂಕರ್‌ನ 3 ತಪ್ಪುಗಳೇ 20 ಮಂದಿಯ ಸಾವಿಗೆ ಕಾರಣವಾಗಿದೆ.

