Friday, March 14, 2025

Latest Posts

BREAKING NEWS: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡಕ್ಕೆ ಮೊದಲ ಸ್ಥಾನ, ಚಿತ್ರದುರ್ಗ ಕೊನೆ ಸ್ಥಾನ

- Advertisement -

ಬೆಂಗಳೂರು: ಏಪ್ರಿಲ್-ಮೇ ನಲ್ಲಿ ನಡೆದಿದ್ದಂತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಶೇ.61.88 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರು: ಶೇ.68.72 ಬಾಲಕರು: ಶೇ.55.22ರಷ್ಟು ಉತ್ತೀರ್ಣರಾಗಿದ್ದಾರೆ. ಈ ಬಾರಿ 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನೂ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ದಿನಾಂಕವನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುವುದು ಎಂಬುದಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಬಿಡುಗಡೆ ಮಾಡಿದಂತ ಅವರು, ವಿಜ್ಞಾನ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಶೇಕಡಾ 62.18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ನಗರ ಪ್ರದೇಶದಲ್ಲಿ ಶೇಕಡಾ 61.78 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಉತ್ತೀರ್ಣರಾದವರ ಪೈಕಿ ಬಾಲಕಿಯರು ಶೇ. 68.72 ಸಾಧನೆಗೈದರೆ, ಬಾಲಕರು ಶೇ. 55.22 ಸಾಧನೆಗೈದಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶದಲ್ಲಿ ಶೇ 0.6ರಷ್ಟು ಏರಿಕೆ ಕಂಡಿದೆ. ಪೂರಕ ಪರೀಕ್ಷೆ ದಿನಾಂಕವನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುವುದು ಎಂದ ಸಚಿವ ಬಿ ಸಿ ನಾಗೇಶ್ ಈ ಬಾರಿಯೂ ವಿಜ್ಞಾನ ವಿಭಾಗದಲ್ಲಿ ಫಲಿತಾಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ವಿಜ್ಞಾನ ವಿಭಾಗದಲ್ಲಿ ಶೇ 72.53 ಫಲಿತಾಂಶ ದಾಖಲಾದರೆ, ವಾಣಿಜ್ಯ ವಿಭಾಗದಲ್ಲಿ 64.97 ಶೇಕಡಾ ಹಾಗೂ ಕಲಾ ವಿಭಾಗದಲ್ಲಿ ಶೇ 58.71 ಫಲಿತಾಂಶ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಶೇ 88.02 ಫಲಿತಾಂಶ ದಾಖಲಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡರೆ, ಉಡುಪಿ 86.38 ಶೇಕಡಾ ಫಲಿತಾಂಶ ದಾಖಲಿಸಿ ದ್ವಿತೀಯ ಸ್ಥಾನ ಪಡೆದುಕೊಂಡರೆ, 77.14 ಶೇಕಡಾ ಫಲಿತಾಂಶ ದಾಖಲಿಸಿರುವ ವಿಜಯಪುರ ತೃತೀಯ ಸ್ಥಾನ ಪಡೆದುಕೊಂಡಿದೆ. ಚಿತ್ರದುರ್ಗ ಜಿಲ್ಲೆ 49.31 ಶೇಕಡಾ ಫಲಿತಾಂಶ ದಾಖಲಿಸಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.

91,106 ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೆ, 2,14,115 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆ, 68,444 ಮಂದಿ ವಿದ್ಯಾರ್ಥಿಗಳು ದ್ವಿತೀಯ ದರ್ಜೆ, 49,301 ಮಂದಿ ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸರಕಾರಿ ಪದವಿಪೂರ್ವ ಕಾಲೇಜುಗಳು ಶೇ 52.84 ಫಲಿತಾಂಶ ದಾಖಲಿಸಿದರೆ, ಅನುದಾನಿತ ಪದವಿಪೂರ್ವ ಕಾಲೇಜುಗಳು 62.05, ಕಾರ್ಪೊರೇಶನ್ ಪದವಿಪೂರ್ವ ಕಾಲೇಜುಗಳು 55.72, ವಿಭಿಜಿತ ಪದವಿಪೂರ್ವ ಕಾಲೇಜುಗಳು 72.96 ಶೇಕಡಾ ಫಲಿತಾಂಶ ದಾಖಲಿಸಿದೆ ಎಂದ ಸಚಿವರು, ಈ ಬಾರಿ ಗಣಿತ ವಿಷಯದಲ್ಲಿ 14 ಸಾವಿರ ಮಂದಿ ವಿದ್ಯಾರ್ಥಿಗಳು 100 ಪೂರ್ಣ ಅಂಕಗಳನ್ನು ಪಡೆದುಕೊಂಡರೆ, ಆಂಗ್ಲ ಭಾಷಾ ವಿಷಯದಲ್ಲಿ ಇಬರು 100 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕನ್ನಡ ಭಾಷಾ ವಿಷಯದಲ್ಲಿ 563 ಮಂದಿ ವಿದ್ಯಾರ್ಥಿಗಳು 100 ಪೂರ್ಣ ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪರೀಕ್ಷಾ ಉತ್ತರ ಪತ್ರಿಕೆ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಜೂನ್ 30 ಕೊನೆ ದಿನಾಂಕವಾಗಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜುಲೈ 13 ಕೊನೆ ದಿನವಾಗಿದೆ ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಇಂದು ಪ್ರಕಟವಾದಂತ ದ್ವಿತೀಯ ಪಿಯು ಫಲಿತಾಂಶವನ್ನು ಪಿಯು ಬೋರ್ಡ್ ಅಧಿಕೃತ ಫಲಿತಾಂಶದ ಜಾಲತಾಣ  kseeb.kar.nic.in, pue.kar.nic.in ಕ್ಕೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ.

- Advertisement -

Latest Posts

Don't Miss