ಕಾವೇರಿ ನೀರು ಬೆಂಗಳೂರಿಗರ ಜೀವನಾಡಿ. ಒಂದೆರಡು ದಿನ ನೀರಿಲ್ಲ ಅಂದ್ರೆ ಜನರು ತತ್ತರಿಸಿ ಹೋಗ್ತಾರೆ. ಹೀಗಿರೋವಾಗ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಸೆಪ್ಟೆಂಬರ್ 15, 16 ಮತ್ತು 17 ಅಂದ್ರೆ 3 ದಿನಗಳ ಕಾಲ ಸ್ಥಗಿತಗೊಳ್ಳಲಿದೆ.
ಸೆಪ್ಟೆಂಬರ್ 15ರ ಮಧ್ಯರಾತ್ರಿ 1 ಗಂಟೆಯಿಂದ ಸೆಪ್ಟೆಂಬರ್ 17ರ ಮಧ್ಯಾಹ್ನ 1 ಗಂಟೆಯವರೆಗೆ, ಬೆಂಗಳೂರಿನ ಅನೇಕ ಭಾಗಗಳಲ್ಲಿ 60 ಗಂಟೆಗಳ ಕಾಲ ನೀರಿನ ಸರಬರಾಜು ಸ್ಥಗಿತವಾಗಲಿದೆ. ಹೀಗಂತ ಬೆಂಗಳೂರು ಜಲಮಂಡಳಿ ತಿಳಿಸಿದೆ. ಈ ಅವಧಿಯಲ್ಲಿ ನಡೆಯುವ ತುರ್ತು ಕಾಮಗಾರಿಯಿಂದ ಜಲರೇಚಕ ಯಂತ್ರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳ ನಿರ್ವಹಣೆ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಮನೆಮನೆಗೆ ನೀರಿನ ಪೂರೈಕೆ ಬಹುತೇಕ ಸ್ಥಗಿತವಾಗಲಿದೆ.
ಸಾರ್ವಜನಿಕರು ಅಗತ್ಯ ನೀರನ್ನ ಮುಂಚಿತವಾಗಿ ಸಂಗ್ರಹಿಸಿಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ. ನೀರಿನ ಕೊರತೆಯಿಂದ ಉಂಟಾಗುವ ಸಮಸ್ಯೆ ತಡೆಯಲು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದು ಸೂಕ್ತ ಅಂತ ತಿಳಿಸಿದೆ. ನೀರಿನ ಕೊರತೆಗೆ ಜೊತೆಗೆ KPTCL ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ಸೆಪ್ಟೆಂಬರ್ 14 ಮತ್ತು 15ರಂದು ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಲಿದೆ.
ಮಾರತಹಳ್ಳಿ, ಇಸ್ರೋ ಕ್ಯಾಂಪಸ್, ಬಾಗ್ಮನೆ ಟೆಕ್ ಪಾರ್ಕ್, ಇಂದಿರಾನಗರ 1ನೇ ಮತ್ತು 2ನೇ ಹಂತ, 80 ಅಡಿ ರಸ್ತೆ, CMH ರಸ್ತೆ, ಜೀವನ್‌ಭೀಮಾನಗರ, ತಿಪ್ಪಸಂದ್ರ, LIC ಕಾಲೋನಿ, ಬಸವನಗರ, ವಿಭೂತಿಪುರ, ವಿಶ್ವಜಿತ್ ಲೇಔಟ್, ಕುವೆಂಪು ರಸ್ತೆ, ಕೃಷ್ಣಪ್ಪ ಗಾರ್ಡನ್, ಏರ್‌ಪೋರ್ಟ್ ರಸ್ತೆ ಸೇರಿದಂತೆ ಹಲವಾರು ಪ್ರದೇಶಗಳು ಪವರ್ ಕಟ್‌ಗೆ ಒಳಪಡುವ ಸಾಧ್ಯತೆ ಇದೆ. ಹಾಗಾಗಿ ನಗರದ ಜನತೆ ಮುಂಜಾಗ್ರತಾ ಕ್ರಮವನ್ನ ವಹಿಸಿ ನೀರು ಶೇಖರಣೆ ಮಾಡಿ ಇಟ್ಟುಕೊಳ್ಳೋದು ಉತ್ತಮ.
ವರದಿ : ಲಾವಣ್ಯ ಅನಿಗೋಳ




