ಶಬರಿಮಲೆಯಲ್ಲಿ ಚಿನ್ನದ ಹಗರಣದ ನಡೆದಿದೆ. ಈ ಹಿನ್ನಲೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮೂರು ದಿನಗಳಿಂದ ಪದೇ ಪದೇ ವಾಗ್ವಾದ ನಡಿಯುತ್ತಿದೆ. ಕೇರಳ ವಿಧಾನಸಭೆಯು ಪ್ರಸ್ತುತ ಅಧಿವೇಶನದ ಉಳಿದ ಅವಧಿಗೆ ಮೂವರು ವಿರೋಧ ಪಕ್ಷದ ಶಾಸಕರನ್ನು ಅಮಾನತುಗೊಳಿಸಿದೆ. M. ವಿನ್ಸೆಂಟ್, ರೋಜಿ M. ಜಾನ್, ಸನೀಶ್ ಕುಮಾರ್ ಜೋಸೆಫ್ ಅವರು ಅಮಾನತುಗೊಂಡಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ. ರಾಜೇಶ್ ಅವರು ಪ್ರಸ್ತಾವನೆ ಮಂಡಿಸಿದ್ದಾರೆ. ಶಾಸಕರು ವಿಧಾನಸಭೆಯ ಶಿಸ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ವರ್ತಿಸಿದ್ದಾರೆ. ಸ್ಪೀಕರ್ ಮತ್ತು ವಿಧಾನಸಭೆಯ ವಿಶೇಷ ಸವಲತ್ತುಗಳನ್ನ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ. ಶಾಸಕರ ದೌರ್ಜನ್ಯದಿಂದ ವಿಧಾನಸಭೆಯ ಚೀಫ್ ಮಾರ್ಷಲ್ ಅವರಿಗೆ ಕೈಗೆ ಗಂಭೀರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ ಎಂದು ಸಚಿವ ರಾಜೇಶ್ ಗಮನಿಸಿದರು.
ಅಮಾನತುಗೊಂಡ ಶಾಸಕರು ಕಲಾಪದ ಸಮಯದಲ್ಲಿ ಗೈರುಹಾಜರಾಗಿದ್ದರಿಂದ ಈ ನಿಲುವಳಿಯನ್ನು ವಿರೋಧವಿಲ್ಲದೆ ಅಂಗೀಕರಿಸಲಾಯಿತು. ಪರಿಣಾಮವಾಗಿ, ಶುಕ್ರವಾರ ನಡೆಯಲಿರುವ 15 ನೇ ವಿಧಾನಸಭೆಯ 14 ನೇ ಅಧಿವೇಶನದ ಅಂತಿಮ ದಿನದಂದು ಮೂವರು ಶಾಸಕರು ಭಾಗವಹಿಸಲು ಸಾಧ್ಯವಾಗುವುದಿಲ್ಲ.
ವಿಧಾನಸಭೆಯ ಕಲಾಪ ಪ್ರಾರಂಭವಾದ ಅಕ್ಟೋಬರ್ 6 ರಿಂದ ವಿರೋಧ ಪಕ್ಷಗಳು ಪದೇಪದೇ ಕಲಾಪಕ್ಕೆ ಅಡ್ಡಿ ಉಂಟುಮಾಡುತ್ತಿದ್ದು, ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿವೆ ಎಂದು ಸರ್ಕಾರದ ಪಕ್ಷದಿಂದ ಆರೋಪಗಳಾಗಿವೆ. ಈ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗಳ ಮೇಲೂ ಕಿರುಕುಳ ಮತ್ತು ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ.
ವರದಿ : ಲಾವಣ್ಯ ಅನಿಗೋಳ

