ಕರ್ನಾಟಕ ತಂಡಕ್ಕೆ 3 ಹೊಸ ಮುಖ ಸೇರ್ಪಡೆ

ಮುಂಬರುವ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ ಕೃಷ್ಣ ಕರ್ನಾಟಕ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮಯಾಂಕ್ ಅಗರ್ವಾಲ್ ನಾಯಕತ್ವದ 16 ಆಟಗಾರರ ತಂಡಕ್ಕೆ ಕರುಣ್ ನಾಯರ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಇನ್ನು, ಹರ್ಷಿಲ್ ಧರ್ಮನಿ, ಧ್ರುವ ಪ್ರಭಾಕರ್ ಮತ್ತು ಶ್ರೀಶ ಆಚಾರ್ ಈ ಬಾರಿ ಕರ್ನಾಟಕ ತಂಡಕ್ಕೆ ಸೇರ್ಪಡೆಯಾದ ಮೂರು ಹೊಸಮುಖ ಆಟಗಾರರು.

ಬಿಸಿಸಿಐ ಸೂಚನೆಯಂತೆ, ಭಾರತೀಯ ತಂಡದ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಕನಿಷ್ಠ ಎರಡು ಪಂದ್ಯಗಳಲ್ಲಿ ಕಡ್ಡಾಯವಾಗಿ ಆಡಬೇಕಿರುವ ಹಿನ್ನೆಲೆಯಲ್ಲಿ, ಕೆಎಲ್ ರಾಹುಲ್ ಈ ಸೀಸನ್‌ನಲ್ಲಿ ರಾಜ್ಯ ತಂಡದ ಪರ ಮೊದಲ ಬಾರಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ರಾಹುಲ್ ಲೀಗ್ ಹಂತದ ಎಲ್ಲಾ ಪಂದ್ಯಗಳಿಗೂ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಡಿ.24ರಿಂದ ಆರಂಭಗೊಳ್ಳಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಎ ಗುಂಪಿನಲ್ಲಿ ಸ್ಪರ್ಧಿಸಲಿದ್ದು, ತನ್ನ ಲೀಗ್ ಪಂದ್ಯಗಳನ್ನು ಅಹಮದಾಬಾದ್‌ನಲ್ಲಿ ಆಡಲಿದೆ.

ಹೊಸಮುಖ ಆಟಗಾರರಾದ 20 ವರ್ಷದ ಬ್ಯಾಟರ್ ಹರ್ಷಿಲ್ ಧರ್ಮನಿ, 20 ವರ್ಷದ ಆಲ್ರೌಂಡರ್ ಧ್ರುವ ಪ್ರಭಾಕರ್ ಹಾಗೂ 29 ವರ್ಷದ ಎಡಗೈ ಸ್ಪಿನ್ನರ್ ಶ್ರೀಶ ಆಚಾರ್, ಇತ್ತೀಚಿನ ಮಹಾರಾಜ ಟ್ರೋಫಿ, ವಿವಿಧ ವಯೋಮಿತಿ ರಾಷ್ಟ್ರೀಯ ಟೂರ್ನಿಗಳು ಮತ್ತು KSCA ಲೀಗ್‌ಗಳಲ್ಲಿ ತೋರಿದ ಉತ್ತಮ ಪ್ರದರ್ಶನದ ಆಧಾರದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದು ಅಮಿತ್ ವರ್ಮ ನೇತೃತ್ವದ ನೂತನ ಆಯ್ಕೆ ಸಮಿತಿ ಆರಿಸಿದ ಮೊದಲ ತಂಡವಾಗಿದ್ದು, ಪಿ.ವಿ. ಸುಮಂತ್ ಅವರನ್ನು ತಂಡದ ಹೊಸ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author