ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆಯ ಕಾರ್ಯಚಟುವಟಿಕೆಗಳ ಪರಿಣಾಮವಾಗಿ, ಸುಮಾರು 25 ಸಾವಿರರಿಂದ 30 ಸಾವಿರದವರೆಗೆ ಸರ್ಕಾರಿ ನೌಕರರಿಗೆ ವೇತನ ಬಿಡುಗಡೆ ವಿಳಂಬವಾಗಿದೆ. ಹಣಕಾಸು ಇಲಾಖೆಯ ಬಟವಾಡೆ ಅಧಿಕಾರಿಗಳನ್ನು ಜಾತಿ ಗಣತಿ ಕಾರ್ಯಕ್ಕೆ ನಿಯೋಜಿಸಿರುವ ಕಾರಣ, ಅವರು ತಮ್ಮ ಕಚೇರಿಗಳಿಗೆ ಹಾಜರಾಗದೇ ಬಿಲ್ ಪ್ರಕ್ರಿಯೆ ನಡೆಸಲಾಗದೆ ವೇತನತಡವಾಗಿದೆ.
ಸಾಮಾನ್ಯವಾಗಿ ಪ್ರತೀ ತಿಂಗಳು 1ನೇ ತಾರಿಖಿಗೆ ವೇತನ ಬಿಡುಗಡೆ ಆಗುತ್ತದೆ. ಆದರೆ ಅಕ್ಟೋಬರ್ ತಿಂಗಳು 10 ದಿನಗಳು ಕಳೆದರೂ ನಗರ ವ್ಯಾಪ್ತಿಯ ಹಲವು ಇಲಾಖೆಗಳ ಸಾವಿರಾರು ನೌಕರರು ವೇತನ ಪಡೆಯದೆ ಕುಳಿತಿದ್ದಾರೆ. ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹೇಳುವ ಪ್ರಕಾರ, ಸರ್ಕಾರ ವೇತನ ಬಿಡುಗಡೆ ಮಾಡುವ ಅಥವಾ ಬಟವಾಡೆ ಅಧಿಕಾರಿಗಳನ್ನೂ ಜಾತಿ ಗಣತಿ ಸಮೀಕ್ಷೆಗೆ ನಿಯೋಜಿಸಲಾಗಿದೆ.
ಅವರು ಕಚೇರಿಗೆ ಆಗಮಿಸಿ ಬಟವಾಡೆ ನೀಡುವವರೆಗೆ ವೇತನ ಆಗುವುದಿಲ್ಲ. ಬಟವಾಡೆ ಅಧಿಕಾರಿಗಳು ಇರುವ ಕೆಲವು ಇಲಾಖೆಗಳಲ್ಲಿ ಮಾತ್ರ ವೇತನ ಆಗಿದೆ. ವಿವಿಧ ಇಲಾಖೆಗಳ ಸುಮಾರು 30 ಸಾವಿರ ನೌಕರರು ಇನ್ನೂ ವೇತನ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ಸರ್ಕಾರ ತಕ್ಷಣ ಸ್ಪಂದಿಸಬೇಕೆಂಬ ಹಾಗೂ ಬಟವಾಡೆ ಅಧಿಕಾರಿಗಳನ್ನು ಹಿಂದಿರುಗಿಸಿ ವೇತನ ಪ್ರಕ್ರಿಯೆ ಆರಂಭಿಸಬೇಕೆಂಬ ಆಗ್ರಹವನ್ನು ನೌಕರ ಸಂಘಗಳು ವ್ಯಕ್ತಪಡಿಸಿವೆ.