ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಮತ್ತು ಅನಂತ್ ಕುಮಾರ್ ಹೆಗ್ಡೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ನಾಯಕರೆಂದು ಬಿಜೆಪಿ ಗುರುತಿಸಿದೆ.
ಮಾಜಿ ಸಂಸದೆ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಮತ್ತು ಅನಂತ್ ಕುಮಾರ್ ಹೆಗ್ಡೆ ಸೇರಿದಂತೆ ತನ್ನ 38 ನಾಯಕರನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವವರೆಂದು ಬಿಜೆಪಿ ಗುರುತಿಸಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದ್ದಾರೆ. ಹಾಗೂ ಈ ಪೈಕಿ 27 ಚುನಾಯಿತ ನಾಯಕರಿಗೆ ಇಂತಹ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದ್ದು, ಧಾರ್ಮಿಕ ವಿಚಾರಗಳ ಕುರಿತು ಹೇಳಿಕೆ ನೀಡುವ ಮುನ್ನ ಪಕ್ಷದಿಂದ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಮತ್ತು ದೆಹಲಿ ಬಿಜೆಪಿ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಅವರ ವಿರುದ್ಧ ಕ್ರಮ ಕೈಗೊಂಡ ನಂತರ ಪಕ್ಷವು ಈ ಬಗ್ಗೆ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ.
ಕಳೆದ 8 ವರ್ಷಗಳಿಂದ(ಸೆಪ್ಟೆಂಬರ್ 2014 ರಿಂದ ಮೇ 3, 2022 ರವರೆಗೆ) ನಾಯಕರ ಹೇಳಿಕೆಗಳನ್ನು ಐಟಿ ತಜ್ಞರ ಸಹಾಯದಿಂದ ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಸುಮಾರು 5,200 ಹೇಳಿಕೆಗಳು ಅನಗತ್ಯವೆಂದು ಕಂಡುಬಂದಿದ್ದು, 2,700 ಹೇಳಿಕೆಗಳ ಪದಗಳು ಸೂಕ್ಷ್ಮವಾಗಿರುವುದು ಕಂಡುಬಂದಿದೆ. ಹಾಗೂ 38 ನಾಯಕರ ಹೇಳಿಕೆಗಳನ್ನು ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವ ವರ್ಗದಲ್ಲಿ ಇರಿಸಲಾಗಿದೆ.