Political news: ಕಾಮಗಾರಿ ಮುಗಿದ ಬಳಿಕ ಹಣ ಬಿಡುಗೆಡೆಗೆ ಲಂಚ ನೀಡುವುದು ಇನ್ನೂ ನಿಂತಿಲ್ಲವೆಂದು ಗುತ್ತಗೆದಾರರು ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ, ಕಾಂಗ್ರೆಸ್ಸಿಗರು 40 ಪರ್ಸೆಂಟ್ ಸರ್ಕಾರ ಎನ್ನುತ್ತಿದ್ದರು. ಆದರೆ ಈಗಲೂ ನಾವು ಕೆಲಸಕ್ಕಾಗಿ ಹಣ ಬಿಡುಗಡೆಯಾಗಬೇಕು ಅಂದ್ರೆ, ಲಂಚ ನೀಡಲೇಬೇಕು ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗುತ್ತಿದಾರರ ಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ.ಬಲರಾಮಯ್ಯ, ಚುನಾವಣೆಗೂ ಮುನ್ನ ನಾವು ಆಯ್ಕೆಯಾಗಿ ಬಂದರೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ. ಕಮಿಷನ್ ದಂಧೆ ನಿಲ್ಲಿಸುತ್ತೇವೆ ಎಂದು ಹೇಳಿದ್ದರು. ಆದರೆ ಭ್ರಷ್ಟಾಚಾರ ಇನ್ನೂ ನಿಂತಿಲ್ಲ. ಇದು ಹೀಗೆ ಮುಂದುವರಿದರೆ, ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ, ಮೊದಲೆಲ್ಲ ನಾವು ಕೊಟ್ಟಷ್ಟು ಹಣ ಪಡೆದು, ಕೆಲಸಕ್ಕಾಗಿ ಹಣ ಬಿಡುಗಡೆ ಮಾಡುತ್ತಿದ್ದರು. ಆದರೆ ಈಗ ಅವರು ಕೇಳಿದಷ್ಟು ನಾವು ಕೊಡಬೇಕು. ಲಂಚದ ಪ್ರಮಾಣ ಕಡಿಮೆಯಾಗುತ್ತದೆ ಎಂದು ನಾವು ತಿಳಿದಿದ್ದೆವು. ಆದರೆ ಅದು ಹೆಚ್ಚಾಗುತ್ತಲೇ ಇದೆ. ಸಿದ್ದರಾಮಯ್ಯ ಸರ್ಕಾರವೂ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಶಾಸಕರ ಒತ್ತಡಕ್ಕೆ ಮಣಿದು ಕಾಮಗಾರಿ ನಡೆಸಿದರೆ, ಬಿಲ್‌ಗಾಗಿ ವರ್ಷಗಟ್ಟಲೇ ಕಾಯಬೇಕು. ಕೊನೆಗೆ ಲಂಚ ಕೊಟ್ಟು ಬಿಡುಗಡೆ ಮಾಡಿಸಬೇಕು. ರಾಜ್ಯದಲ್ಲಿ ವಿವಿಧ ಇಲಾಖೆಗಳಿಂದ ಸುಮಾರು 31 ಸಾವಿರ ಕೋಟಿಗೂ ಹೆಚ್ಚು ಹಣ ಬರಬೇಕಿದೆ. ಮುಂದಿನ ಎರಡು ತಿಂಗಳಲ್ಲಿ ಆ ಹಣ ಬಾರದೇ ಇದ್ದಲ್ಲಿ, ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.




