ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊರವಲಯದಲ್ಲಿ ಇರುವ ಐತಿಹಾಸಿಕ ದೇವಸ್ಥಾನವಾದ ಪರವಾಶು ದೇವಾಲಯ. ಪರವಾಶು ದೇಗುಲದ ಜೀರ್ಣೋದ್ದಾರಕ್ಕೆ ಅಂದಿನ ತಹಸೀಲ್ದಾರ್ ಎಂ.ನಂಜುಂಡಯ್ಯ ಅವರು ಮುಂದಾದ ಬಳಿಕ ಇತಿಹಾಸ ಪ್ರಸಿದ್ಧ ದೇಗುಲಕ್ಕೆ ಕಾಯಕಲ್ಪ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತಿತ್ತು ಆದರೆ ದೇವಾಲಯದ ಜೀರ್ಣೋದ್ದಾರಕ್ಕೂ ಮೊದಲೇ ತಹಸೀಲ್ದಾರ್ ಎಂ.ನಂಜುಂಡಯ್ಯ ಅವರು ಮುಂಬಡ್ತಿ ಮೇಲೆ ವರ್ಗಾವಣೆಯಾಗಿದ್ದಾರೆ. ಪರವಾಶು ದೇಗುಲಕ್ಕೆ ಹೊಸ ಮೆರುಗು ನೀಡಲೇಬೇಕೆನ್ನುವ ಹಂಬಲದಿಂದ ದೇಗುಲದ ಮುಂಭಾಗ ಮತ್ತು ಸುತ್ತಲಿನ ಪ್ರದೇಶವನ್ನ ಸ್ವಚ್ಛಗೊಳಿಸಿದ್ದರಾದರೂ ಜೀರ್ಣೋದ್ದಾರಕ್ಕೆ ಬೆಳಕು ಚೆಲ್ಲಲಾಗಲಿಲ್ಲ. ಸರಿಸುಮಾರು 400 ವರ್ಷಗಳ ಇತಿಹಾಸವಿರುವ ಈ ದೇಗುಲವು ಜೀರ್ಣೋದ್ದಾರವನ್ನು ನಿರೀಕ್ಷಿಸುತ್ತಿದೆ ಆದರೆ ಸಂಬಂಧಪಟ್ಟ ಇಲಾಖೆ ಮಾತ್ರ ಮುಂದಾಗುತ್ತಿಲ್ಲ.

ದೇಗುಲದ ಇತಿಹಾಸ..
ಮೈಸೂರಿನ ಚಿಕ್ಕದೇವರಾಜ ಒಡೆಯರು ಅಧಿಕಾರವಹಿಸಿಕೊಂಡ ಬಳಿಕ ಇವರ ತಂದೆ ದೊಡ್ಡ ದೇವರಾಜ ಒಡೆಯರು ಅಕಾಲಿಕ ಮರಣಕ್ಕೀಡಾಗುತ್ತಾರೆ ನಂತರ 1674 ರಲ್ಲಿ ಆಗಿನ ಗುಂಡ್ಲುನದಿಯ ಎಡಭಾಗದಲ್ಲಿ ಒಂದು ಅಗ್ರಹಾರ ಮತ್ತು ಪರವಾಶು ದೇಗುಲವನ್ನು ನಿರ್ಮಿಸಿ ಬ್ರಾಹ್ಮಣರಿಗೆ ವಹಿಸಿದ್ದರು ಎಂದು ಇತಿಹಾಸಪುಟಗಳು ಸಾರಿಹೇಳುತ್ತಿವೆ. ಈ ದೇಗುಲವು ತಲಕಾಡಿನ ವೈದ್ಯನಾಥೇಶ್ವರ ದೇವಾಲಯದ ವಾಸ್ತುಶಿಲ್ಪವನ್ನೇ ಅರ್ಥಾತ್ ಹೋಲುತ್ತದೆ. ತಲಹದಿಗೆ ಕಲ್ಲಿನ ಚಪ್ಪಡಿಗಳನ್ನು ಬಳಸಲಾಗಿದ್ದು ದೊಡ್ಡಬಂಡೆ ಕಲ್ಲುಗಳನ್ನು ಬಳಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಸುಖನಾಶಿ,ಗರ್ಭಗೃಹ, ಚತುರಸ ಆಕಾರದ ನವರಂಗವಿದೆ ಇನ್ನು 13 ಕಂಬಗಳು, ದಶಾವತಾರ, ನಂದಿ, ಹನುಮಂತ ಇನ್ನಿತರ ಚಿತ್ರಕಲಾಕೃತಿಗಳನ್ನ ಕೆತ್ತಲಾಗಿದೆ.
ಸುಮಾರು 17 ನೇ ಶತಮಾನದಲ್ಲಿ ನಿರ್ಮಿತವಾಗಿದ್ದ ಈ ದೇಗುಲದಲ್ಲಿ ಪೂಜಾ ಕೈಕಂಕರ್ಯಗಳು ನಡೆಯುತ್ತಿದ್ದವು ಇತಿಹಾಸಪುಟದಲ್ಲಿ ಮುದ್ರಿತವಾಗಿದೆ. ಆಗಿನ ದಿನಗಳಲ್ಲಿ ಮಹಾಮಾರಿ ಪ್ಲೇಗ್ ರೋಗ ಕಾಣಿಸಿಕೊಂಡ ಪರಿಣಾಮ ಅರ್ಚಕರು ದೇಗುಲದ ವಿಗ್ರಹಗಳನ್ನು ಪಟ್ಟಣದ ವಿಜಯನಾರಾಯಣ ಸ್ವಾಮಿ ದೇವಾಲಯಕ್ಕೆ ಸ್ಥಳಾಂತರಿಸಿದ್ದರು ಎಂದು ಇತಿಹಾಸ ಪುಟಗಳಲ್ಲಿ ತಿಳಿಯಪಡಿಸಲಾಗಿದೆ. ಇದಾದ ಬಳಿಕ ಪರವಾಶು ದೇಗುಲ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದು ಹೋಗಿತ್ತು. ಇಂತಹ ದುಃಸ್ಥಿತಿಯಲ್ಲಿದ್ದ ದೇಗುಲಕ್ಕೆ 2010 ರಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಅಮರ್ ನಾರಾಯಣ್ ಅವರು ಮುಜರಾಯಿ ಇಲಾಖೆ ವತಿಯಿಂದ ರಕ್ಷಣೆಗೆ ಮುಂದಾಗಿದ್ದರು ಎನ್ನಲಾಗುತ್ತಿದ್ದು ಜಿಲ್ಲಾಧಿಕಾರಿಗಳ ವರ್ಗಾವಣೆ ಬಳಿಕ ಕಾಮಗಾರಿ ಅಪೂರ್ಣಗೊಂಡಿತು ಎಂದು ಹೇಳಲಾಗುತ್ತಿದೆ.
ಇದಾದ ಹತ್ತು ವರ್ಷಗಳ ಬಳಿಕ ಗುಂಡ್ಲುಪೇಟೆ ತಹಸೀಲ್ದಾರ್ ಎಂ.ನಂಜುಂಡಯ್ಯ ಅವರು ಪುರಾತತ್ವ ಇಲಾಖೆ ಆಯುಕ್ತರಿಗೆ ಪತ್ರ ಬರೆಯುವುದರ ಮೂಲಕ ಜೀರ್ಣೋದ್ದಾರ ಕಾರ್ಯಕ್ಕೆ ಮುಂದಾಗಿದ್ದರು ಆದರೆ ಅಲ್ಪಕಾಲ ಸ್ವಚ್ಛತಾ ಭಾಗ್ಯಕಷ್ಟೇ ದೇವಾಲಯ ಸೀಮಿತವಾಗಿ ಹೋಗಿದೆ.
ಪರವಾಶು ದೇಗುಲದ ಹಿಂಬಾಗದಲ್ಲಿ ಗುಂಡಿಗಳನ್ನು ತೋಡಿದ್ದರು. ಈ ದೇವಾಲಯಕ್ಕೆ ಆಧಿಕಾಲದ ಇತಿಹಾಸವಿದ್ದು ತನ್ನದೇ ಆದ ಭವ್ಯ ಪರಂಪರೆಯನ್ನು ಹೊಂದಿದೆ, ಕಾಲ ಕಾಲಕ್ಕೆ ರಾಜರು ಇಲ್ಲಿ ಅಧಿಕಾರ ನಡೆಸುತ್ತಿದ್ದರು ಎಂಬ ಮಾಹಿತಿ ಶಾಸನ ಅಧ್ಯಯನದಿಂದ ವ್ಯಕ್ತವಾಗುತ್ತಿದೆ. ಜಿಲ್ಲೆಯ ಮತ್ತು ತಾಲೂಕಿನ ವೈಭವೀತೆಯನ್ನು ಸಾರುವ ಪರವಾಶು ದೇಗುಲವನ್ನು ಮುಂದಿನ ಪೀಳಿಗೆಯವರೆಗೂ ರಕ್ಷಿಸಬೇಕಿದೆ. ಈಗಾಗಲೇ ದೇಗುಲದ ಹೊರ ಮತ್ತು ಸುತ್ತಲಿನ ಪ್ರದೇಶ ಸ್ವಚ್ಛತೆಯಿಂದ ಕೂಡಿದ್ದು ಮತ್ತೆ ಗಿಡಗಂಟಿಗಳು ಬೆಳೆದು ಮರವಾಗುವ ಮುನ್ನ ಸಂಬಂಧಿಸಿದ ಇಲಾಖೆ ಇದರ ಪುನರುತ್ಥಾನದ ಕಡೆ ಗಮನಹರಿಸಬೇಕಿದೆ.
ಪರವಾಶು ದೇಗುಲವು ಇತಿಹಾಸ ಪ್ರಸಿದ್ಧ ತಾಣಗಳಲೊಂದಾಗಿದ್ದು ದೇವಾಲಯದ ಸುತ್ತಲೂ ತಂತಿಭೇಲಿ ನಿರ್ಮಿಸಿ ಚಿಕ್ಕಉದ್ಯಾನವನ್ನು ನಿರ್ಮಿಸಲು ಅವಕಾಶವಿದೆ ಇದರಿಂದ ಸಂಜೆ ವೇಳೆ ವಾಯುವಿಹಾರಕ್ಕೆ ಬರುವ ಜನರಿಗೆ ಅನುಕೂಲವಾಗಲಿದೆ ಜೊತೆಗೆ ಪಕ್ಕದಲ್ಲೇ ಇರುವ ಕಲ್ಯಾಣಿ ಕೊಳಕ್ಕೆ ನೀರು ತುಂಬಿಸಿ ಕಾರಂಜಿ ನಿರ್ಮಾಣ ಮಾಡಿದರೆ ಆಕರ್ಷಣೀಯವಾಗಿರುತ್ತದೆ ಮತ್ತು ಪ್ರವಾಸಿಗರ ನೆಚ್ಚಿನ ಕೇಂದ್ರವಾಗಿ ಬದಲಾಗುವ ಸಾಧ್ಯತೆ ಇದೆ.
ಪ್ರಸಾದ್ ಯಡಹುಂಡಿ. ಕರ್ನಾಟಕ ಟಿವಿ, ಗುಂಡ್ಲುಪೇಟೆ