ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಬೊಕ್ಕಸಕ್ಕೆ ಉಂಟಾಗುತ್ತಿರುವ ಭಾರವನ್ನು ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿ ಪಡೆದಿದ್ದ ಸುಮಾರು 4.50 ಲಕ್ಷ BPL ಪಡಿತರ ಕಾರ್ಡ್ಗಳನ್ನು ಆಹಾರ ಇಲಾಖೆ ರದ್ದುಪಡಿಸಿದೆ.
ಈ ನಿರ್ಧಾರದಿಂದಾಗಿ, ರದ್ದುಪಡಿಸಲಾದ ಕಾರ್ಡ್ದಾರರು ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನದಿಂದ ಹೊರಗುಳಿಯಲಿದ್ದಾರೆ. ಇದರ ಪರಿಣಾಮವಾಗಿ ರಾಜ್ಯ ಬೊಕ್ಕಸಕ್ಕೆ ಪ್ರತಿ ತಿಂಗಳು 110 ಕೋಟಿ ರೂ.ಗೂ ಅಧಿಕ ಉಳಿತಾಯವಾಗಲಿದೆ ಎಂದು ಇಲಾಖೆ ಅಂದಾಜಿಸಿದೆ.
ಆಹಾರ ಇಲಾಖೆ ರಾಜ್ಯಾದ್ಯಂತ ನಡೆದ ಪರಿಶೀಲನೆಯ ಬಳಿಕ, 14.50 ಲಕ್ಷ ಫಲಾನುಭವಿಗಳ ಹೆಸರುಗಳನ್ನು ವಿವಿಧ ಯೋಜನೆಗಳ ಪಟ್ಟಿಯಿಂದ ಅಳಿಸಿದೆ. ಈ ಕುಟುಂಬಗಳ ಸದಸ್ಯರು ಆದಾಯ ತೆರಿಗೆ ಪಾವತಿಸುತ್ತಿರುವುದು ಅಥವಾ ಹೆಚ್ಚಿನ ಆದಾಯ ಹೊಂದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ರದ್ದುಪಡಿಸಲಾದ BPL ಕಾರ್ಡ್ಗಳ ಕಾರಣದಿಂದ, ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ ಸುಮಾರು 90 ಕೋಟಿ ರೂ. ಉಳಿತಾಯವಾಗಲಿದೆ. ಜೊತೆಗೆ, ಈ ಫಲಾನುಭವಿಗಳಿಗೆ ಪ್ರತಿ ತಿಂಗಳು ವಿತರಿಸಲಾಗುತ್ತಿದ್ದ ಸುಮಾರು 72.50 ಲಕ್ಷ ಕ್ವಿಂಟಾಲ್ ಪಡಿತರ ವಿತರಣೆಯೂ ಸ್ಥಗಿತಗೊಂಡಿದ್ದು, ಇದರಿಂದ ಹೆಚ್ಚುವರಿ 22 ಕೋಟಿ ರೂ. ವೆಚ್ಚ ಉಳಿಯಲಿದೆ.
ಪ್ರಸ್ತುತ 7,76,206 BPL ಕಾರ್ಡ್ಗಳನ್ನು ‘ಶಂಕಾಸ್ಪದ’ ಪಟ್ಟಿಗೆ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇವುಗಳೂ ರದ್ದಾಗುವ ಸಾಧ್ಯತೆ ಇದೆ. ಈಗಾಗಲೇ BPL ನಿಂದ APLಗೆ ಪರಿವರ್ತನೆಯಾಗಿರುವ ಕಾರ್ಡ್ಗಳಲ್ಲಿ ಶೇ.75ರಷ್ಟು ನೈಜ ಫಲಾನುಭವಿಗಳ ಹೆಸರೇ ಡಿಲೀಟ್ ಆಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
BPL ಕುಟುಂಬದ ಸದಸ್ಯರ ಪೈಕಿ ಯಾರಾದರೂ ಒಬ್ಬರು GST ಅಥವಾ ಆದಾಯ ತೆರಿಗೆ ಪಾವತಿಸಿದರೆ, ಆ ಕುಟುಂಬದ ಕಾರ್ಡ್ ಅನ್ನೇ ರದ್ದುಪಡಿಸಲಾಗುತ್ತಿದೆ ಅಥವಾ APLಗೆ ಪರಿವರ್ತಿಸಲಾಗುತ್ತಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿ ಸಿರುವ ಲಕ್ಷಾಂತರ ಕಾರ್ಡ್ದಾರರು, ಕಾರ್ಡ್ ನಲ್ಲಿ ಆದಾಯ ತೆರಿಗೆ ಪಾವತಿ, ಕಾರು ಹೊಂದಿರುವವರಿಗೆ ಮೊದಲು ನೋಟಿಸ್ ನೀಡಬೇಕು. ಸಮಾಜಾಯಿಷಿ ಪಡೆದು ಕಾರ್ಡ್ನಲ್ಲಿರುವ ಅವರ ಹೆಸರನ್ನು ಡಿಲೀಟ್ ಮಾಡಬೇಕು. ಏಕಾಏಕಿ ರದ್ದುಪಡಿಸುವುದು ಸರಿಯಲ್ಲ, ಎಂದು ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ BPL ಕಾರ್ಡ್ ಇರಲಿ, APL ಕಾರ್ಡ್ ಇರಲಿ. ಯಾರು ಆದಾಯ ತೆರಿಗೆ ಪಾವತಿಸುತ್ತಿರುವರೋ ಅಂತಹವರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕೈ ಬಿಡುತ್ತೇವೆ. ಈ ಬಗ್ಗೆ ಪತ್ತೆ ಕಾರ್ಯ ನಿರಂತರವಾಗಿ ನಡೀತಿರತ್ತೆ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ




