ಚಂಡೀಗಢ : 4ನೇ ಆವೃತ್ತಿಯ ಎಸ್‌ಬಿಐ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ದಿನಗಣನೆ (ಜೂನ್ 4ರಿಂದ) ಆರಂಭಗೊಂಡಿದ್ದು, ಶನಿವಾರ ಪಂಚಕುಲಾದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಅಧಿಕೃತ ಚಿಹ್ನೆ (ಲೋಗೋ), ಮಾಸ್ಕಟ್, ಜೆರ್ಸಿ ಹಾಗೂ ಗೀತೆಯನ್ನು ಅನಾವರಣಗೊಳಿಸಲಾಯಿತು.
ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಹಾಗೂ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರನ್ನೊಳಗೊಂಡಂತೆ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು. ಈ ಕ್ರೀಟಕೂಟಕ್ಕೆ ಅತ್ಯುತ್ತಮ ವೇದಿಕೆ ನಿರ್ಮಾಣವಾಗಿದ್ದು ಈ ಬಾರಿ ಡ್ರೀಮ್-11 ಬೆಂಬಲ ದೊರೆತಿದೆ ಮತ್ತು ಪಿಎನ್‌ಬಿ ಸಂಸ್ಥೆಯು ಸಹಾಯಕ ಪ್ರಾಯೋಜಕರಾಗಿ ಸೇರ್ಪಡೆಗೊಂಡಿದೆ.
‘ಈ ಆವೃತ್ತಿಯ ಖೇಲೋ ಗೇಮ್ಸ್ ಆಯೋಜಿಸುತ್ತಿರುವುದಕ್ಕೆ ಬಹಳ ಹೆಮ್ಮೆ ಹಾಗೂ ಖುಷಿ ಇದೆ. ದೇಶದ ಯುವ ಕ್ರೀಡಾ ಪ್ರತಿಭೆಗಳನ್ನು ನಮ್ಮ ರಾಜ್ಯಕ್ಕೆ ಸ್ವಾಗತಿಸಲು ಕಾತರಿಸುತ್ತಿದ್ದೇವೆ’ ಎಂದು ಮನೋಹರ್ ಲಾಲ್ ಹೇಳಿದರು.
ಇದೇ ವೇಳೆ ಹರ್ಯಾಣದ ಕ್ರೀಡಾ ಸಂಸ್ಕೃತಿಯ ಬಗ್ಗೆ ನೆನೆದ ಮುಖ್ಯಮಂತ್ರಿ ಮನೋಹರ್ ಲಾಲ್ ಅವರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಅತಿಹೆಚ್ಚು ಕ್ರೀಡಾಪಟುಗಳನ್ನು ಹರ್ಯಾಣ ಕಳುಹಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಿದರು. ‘ಬಹುಮುಖ್ಯವಾಗಿ ಒಲಿಂಪಿಕ್ಸ್ ಹಾಗೂ ಇನ್ನಿತರ ಮಹತ್ವದ ಕ್ರೀಡಾಕೂಟಗಳಲ್ಲಿ ಭಾರತ ಗೆದ್ದಿರುವ ಒಟ್ಟು ಪದಕಗಳ ಪೈಕಿ ಮೂರನೇ ಒಂದು ಭಾಗ ಪದಕಗಳನ್ನು ಹರ‌್ಯಾಣದ ಕ್ರೀಡಾಪಟುಗಳೇ ಜಯಿಸಿದ್ದಾರೆ ಎನ್ನುವುದು ಬಹಳ ಸಂತೋಷದ ಸಂಗತಿ’ ಎಂದು ಅವರು ಖುಷಿಯಿಂದ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಖೇಲೋ ಇಂಡಿಯಾ ಯೂಥ್ ಗೇಮ್ಸ್ ಭಾರತದಲ್ಲಿ ಕ್ರೀಡಾ ಕ್ರಾಂತಿಗೆ ಕಾರಣವಾಗಿದ್ದು, 4ನೇ ಆವೃತ್ತಿಯು ಜೂನ್ 4ರಿಂದ ಆರಂಭಗೊಳ್ಳಲಿದೆ. ಈ ಆವೃತ್ತಿಯಲ್ಲಿ ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳ ಒಟ್ಟು 8000 ವಿದ್ಯಾರ್ಥಿಗಳು, 25 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಈ ಪೈಕಿ ಐದು ಸಾಂಪ್ರಾದಾಯಿಕ ಕ್ರೀಡೆಗಳಾದ ಗಟ್ಕಾ, ಕಳರಿಪಯಟ್ಟು, ಥಾಂಗ್-ತಾ, ಮಲ್ಲಕಂಬ ಹಾಗೂ ಯೋಗಾಸನ ಸಹ ಸೇರಿವೆ. ಇವುಗಳನ್ನು ಪ್ರದರ್ಶನ ಕ್ರೀಡೆಗಳಾಗಿ ಸೇರ್ಪಡೆಗೊಳಿಸಲಾಗಿದೆ.
ಪಂಚಕುಲಾದಲ್ಲಿರುವ ತೌ ದೇವಿ ಲಾಲ್ ಕ್ರೀಡಾಂಗಣ ಈ ಕ್ರೀಡಾಕೂಟದ ಕೇಂದ್ರವೆನಿಸಿದ್ದು, ಚಂಡೀಗಢ, ಅಂಬಾಲಾ, ಶಹಾಬಾದ್ ಹಾಗೂ ಡೆಲ್ಲಿ ನಗರಗಳು ಸಹ ಕೆಲ ಸ್ಪರ್ಧೆಗಳಿಗೆ ಆತಿಥ್ಯ ವಹಿಸಲಿವೆ.
‘ಇತ್ತೀಚಿನ ದಿನಗಳಲ್ಲಿ ನಮ್ಮ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಹಲವು ಯುವ ಪ್ರತಿಭೆಗಳಿಗೆ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶಗಳು ಸಿಗುತ್ತಿದ್ದು, ಖೇಲೋ ಇಂಡಿಯಾ ಯೂಥ್ ಹಾಗೂ ಯೂನಿವರ್ಸಿಟಿ ಗೇಮ್ಸ್‌ನಿಂದ ಪ್ರತಿಭೆಗಳು ಹೊರಬರುತ್ತಿದ್ದಾರೆ ಎನ್ನುವ ವಿಚಾರ ಖುಷಿ ನೀಡುತ್ತಿದೆ’ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದರು. ‘ಒಲಿಂಪಿಕ್ಸ್‌ನಲ್ಲಿ ಭಾರತ ಅಗ್ರ ೧೦ರಲ್ಲಿ ಸ್ಥಾನ ಪಡೆಯಬೇಕು ಎನ್ನುವುದು ಪ್ರಧಾನಿ ಮೋದಿ ಅವರ ಮಹದಾಸೆ. ಆ ದಿನ ಬಹಳ ದೂರವಿಲ್ಲ’ ಎಂದು ಠಾಕೂರ್ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಜೆರ್ಸಿ, ಲೋಗೋ, ಗೀತೆ, ಮಾಸ್ಕಟ್ ಅನಾವರಣ ಸಮಾರಂಭದಲ್ಲಿ ಹರ್ಯಾಣ ವಿಧಾನಸಭೆ ಸ್ಪೀಕರ್ ಶ್ರೀ ಜ್ಞಾನಚಂದ್ ಗುಪ್ತಾ, ಉಪಮುಖ್ಯಮಂತ್ರಿ ಶ್ರೀ ದುಷ್ಯಂತ್ ಚೌಟಾಲಾ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಹಾಕಿ ದಿಗ್ಗಜ ಶ್ರೀ ಸಂದೀಪ್ ಸಿಂಗ್ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.
ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನ ಚಿಹ್ನೆಯು ಓಡುತ್ತಿರುವ ಅಥ್ಲೀಟ್ ಅನ್ನು ಕೇಸರಿ ಮತ್ತು ಹಸಿರು ಬಣ್ಣಗಳ ಗೆರೆಗಳ ಮೂಲಕ ರೂಪಿಸಲಾಗಿದೆ. ಜೊತೆಗೆ ಹರ‌್ಯಾಣ ರಾಜ್ಯದ ಇತಿಹಾಸ ಹಾಗೂ ಕಲೆಯನ್ನು ಪ್ರದರ್ಶಿಸುವ ಅಂಶಗಳನ್ನೂ ಒಳಗೊಂಡಿದೆ. ಮಹಾಭಾರತದ ಎರಡು ಪ್ರಸಿದ್ಧ ಚಿತ್ರಗಳನ್ನು ಒಳಗೊಂಡಿದೆ. ಅರ್ಜುನ ತನ್ನ ಬಿಲ್ಲನ್ನು ಎತ್ತಿ ಹಿಡಿದಿರುವುದು ಮತ್ತು ಶ್ರೀಕೃಷ್ಣ ರಥವನ್ನು ಮುನ್ನಡೆಸುತ್ತಿರುವ ಚಿತ್ರಗಳು ಇವೆ. ಜೊತೆಗೆ ಹರ‌್ಯಾಣ ಹಲವು ದಶಕಗಳಿಂದ ಪ್ರಾಬಲ್ಯ ಮೆರೆಯುತ್ತಿರುವ ಐದು ಕ್ರೀಡೆಗಳನ್ನು ಅಳವಡಿಸಲಾಗಿದೆ.
ಮಾಸ್ಕಟ್‌ಗೆ ಧಾಕಡ್ ಎಂದು ಹೆಸರಿಡಲಾಗಿದ್ದು, ಈ ಗೂಳಿಯು ದೇಶದ ಈ ಭಾಗದ ಪ್ರಮುಖ ಅಂಶೆವೆನಿಸಿದೆ. ಜೊತೆಗೆ ಹರ್ಯಾಣದ ಯುವಕ, ಯುವತಿಯರ ಅಗಾಧ ಶಕ್ತಿಯ ಹಿಂದಿನ ರಹಸ್ಯವೂ ಆಗಿದೆ ಎನ್ನುವ ನಂಬಿಕೆ ಇದೆ.
ಕ್ರೀಡಾಕೂಟದ ಅಧಿಕೃತ ಗೀತೆಯನ್ನು ಱಪ್ ತಾರೆ ರಫ್ತಾರ್ ಬರೆದು ಹಾಡಿದ್ದು ಈಗಾಗಲೇ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಈ ಗೀತೆಯು ಹರ‌್ಯಾಣದ ಎಲ್ಲಾ ಕ್ರೀಡಾ ತಾರೆಗಳನ್ನು ಕೊಂಡಾಡಿದೆ. ಇದರಲ್ಲಿ ಹಾಕಿ ದಿಗ್ಗಜ ಸಂದೀಪ್ ಸಿಂಗ್, ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಚಿನ್ನದ ಪದಕವನ್ನು ಅಥ್ಲೀಟ್ ನೀರಜ್ ಚೋಪ್ರಾ, ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ರವಿ ದಹಿಯಾ, ಸಾಕ್ಷಿ ಮಲಿಕ್, ಏಕದಿನ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಸಹ ಒಳಗೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾ ಕ್ರೀಡಾಕೂಟದ ಕ್ರೀಡಾಜ್ಯೋತಿಯನ್ನು ಸರ್ಕಾರವು ಸಿದ್ಧಗೊಳಿಸಿದ್ದು ಇದು ಹರ್ಯಾಣದ ಮೂಲೆ ಮೂಲೆಗೆ ಸಂಚರಿಸಿ ಕ್ರೀಡಾಕೂಟದ ಪ್ರಚಾರ ನಡೆಸುವುದರ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸಲಿದೆ.
ಕ್ರೀಡಾಕೂಟವನ್ನು ಆಯೋಜಿಸಲು ಹರ್ಯಾಣ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಬಹುಕ್ರೀಡಾ ತಾಣಗಳನ್ನು ನಿರ್ಮಿಸಲಾಗಿದೆ. ಸಿಂಥೆಟಿಕ್ ಟ್ರ್ಯಾಕ್‌ಗಳು, ಕೃತಕ ಟರ್ಫ್‌ಗಳು ಸಿದ್ಧಗೊಂಡಿವೆ. ಪಂಚಕುಲಾದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಹೊಸದಾಗಿ ಬ್ಯಾಡ್ಮಿಂಟನ್ ಅಂಕಣವನ್ನು ಸಿದ್ಧಗೊಳಿಸಲಾಗಿದೆ. ಪಂಚಕುಲಾ ಹಾಗೂ ಶಹಾಬಾದ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ಹಾಕಿ ಕ್ರೀಡಾಂಗಣಗಳು ತಲೆಎತ್ತಿದ್ದು, ಅಂಬಾಲಾದಲ್ಲಿ ಯಾವುದೇ ಹವಾಮಾನದಲ್ಲಿ ಬಳಸಬಹುದಾದ ಈಜುಕೊಳ ಸಿದ್ಧಪಡಿಸಲಾಗಿದೆ.
ಕ್ರೀಡಾಕೂಟವನ್ನು ಹರ್ಯಾಣ ರಾಜ್ಯ ಸರ್ಕಾರ, ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಜಂಟಿಯಾಗಿ ಆಯೋಜಿಸುತ್ತಿವೆ.




