4 ನೇ ತರಗತಿ ಹುಡುಗನ ಪರಿಸರ ಕಾಳಜಿಗೆ ಸಲಾಂ..!

www.karnatakatv.net : ರಾಯಚೂರು: ಕಲಿಯುತ್ತಿರುವುದು ಕೇವಲ 4 ನೇತರಗತಿ. ಆದರೆ ಈತನಿಗೆ ಇರುವ ಪರಿಸರ ಕಾಳಜಿ ಅಪಾರ. ಕಳೆದ ಎರಡು ವರ್ಷಗಳಿಂದ ಬಾಧಿಸುತ್ತಿರುವ ಕರೋನಾ ಮಹಾಮಾರಿ ಹಿನ್ನಲೆ ಶಾಲೆಗಳು ಮುಚ್ಚಿ ಹೋಗಿವೆ. ಮನೆಯಲ್ಲಿ ಸುಮ್ಮನೆ ಕುಳಿತು ಮಾಡುವುದಾದರೂ ಏನು.. ? ಎಂಬ ಪ್ರಶ್ನೆಗೆ ಈ ಬಾಲಕ ಕಂಡುಕೊಂಡ ಉತ್ತರ ಪರಿಸರ ಸಂರಕ್ಷಣೆ. ಕಲಿಕೆಯ ಬಿಡುವಿನ ವೇಳೆಯಲ್ಲಿ ಪರಿಸರ ಕಾಳಜಿ ಮೆರೆಯುತ್ತಿರುವ ಈ ಬಾಲಕ ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದ ನಿವಾಸಿ. ಸಾಗರ್ ಎಂಬುದು ಈತನ ಹೆಸರು.  ಪಟ್ಟಣದ ಎಸ್.ವಿ. ಬೊಮ್ಮಸಾಗರ ಶಾಲೆಯಲ್ಲಿ4 ನೇ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿಯ ಪರಿಸರ ಪ್ರೇಮದಿಂದ ಇಂದು “ಪುಣ್ಯಕೋಟಿ” ಎಂಬ ಸಸ್ಯವನ ತಲೆ ಎತ್ತಿ ನಿಂತಿದೆ.

ದಿನ ಬೆಳಗಾದರೆ 6 ಗಂಟೆಗೆ ಏಳುವ ಸಾಗರ್ ದಿನಚರಿ ಆರಂಭವಾಗುವುದೇ ಪುಣ್ಯಕೋಟಿ ಗಾರ್ಡನ್ ಮೂಲಕ. ಸಸ್ಯಗಳಿಗೆ ನೀರುಣಿಸುವುದು, ಗೊಬ್ಬರ ಹಾಕುವುದು, ಹೊಸ ತಳಿಯ ಸಸ್ಯಗಳು ಬಂದಿದ್ದರೆ ಅವುಗಳಿಗೇ ಬೇಕಾಗುವ ಮಣ್ಣನ್ನು ಸ್ವತಃ ತಾನೇ ಕಲಿಸಿ ಪಾಟ್ ಒಳಗಡೆ ಹಾಕುತ್ತಾನೆ. ತಾನು ಪ್ರೀತಿಯಿಂದ ಬೆಳೆಸಿರುವ ಸಸಿಗಳನ್ನು ಮಗುವಿನಂತೆ ಜೋಪಾನವಾಗಿ ನೋಡಿಕೊಳ್ಳುತ್ತಾನೆ.

ಬಾಲ್ಯದಿಂದಲೇ ಪರಿಸರ, ಪ್ರಾಣಿ, ಪಕ್ಷಿಗಳೆಡೆಗೆ ವಿಶೇಷ ಕಾಳಜಿ ಬೆಳೆಸಿಕೊಂಡಿರುವ ಸಾಗರ್, ತಾನೊಬ್ಬನೇ ಅಲ್ಲ ಮರ ಗಿಡಗಳನ್ನ, ಸಸಿಗಳನ್ನ ಬೆಳೆಸುತ್ತೇನೆ ಎಂದು ಮುಂದೆ ಬಂದವರಿಗೆ ತಾನು ಬೆಳೆಸಿರುವ ಸಸಿಗಳನ್ನು ಉಚಿತವಾಗಿ ನೀಡುತ್ತಾನೆ. ಪುಣ್ಯಕೋಟಿ ಉದ್ಯಾನವನದಲ್ಲಿ ವಿವಿದ ಬಗೆಯ ವಿಭಿನ್ನ ತಳಿಯ ಸಸ್ಯಗಳಿವೆ. ಮಯೂರಿ, ರುಹಾಲಿಯ, ಮನೀ ಪ್ಲಾಂಟ್, ಅಕಾಲಿಫಾ, ಪೆಂಟನಸ್, ಸಫ್ಲೇರ, ಬೇಬಿ ಸನ್ ರೋಸ್, ಹೀಗೆ ನಾನಾ ಬಗೆಯ ಹಲವು ಜಾತಿಯ ಸಸ್ಯಗಳು ಇಲ್ಲಿ ಕಾಣ ಸಿಗುತ್ತವೆ.

ಪರಿಸರ ಮಾಲಿನ್ಯ ತಡೆಗಟ್ಟದಿದ್ದರೆ ಮನುಕುಲಕ್ಕೆ ಕಂಟಕವಿದೆ. ಕರೋನಾದಂತಹ ಮಹಾಮಾರಿ ರೋಗಗಳು ನಮ್ಮನ್ನ ಬಾಧಿಸಬಾರದು ಎಂದರೆ, ಪರಿಸರದ ಬಗೆಗಿನ ಮನುಷ್ಯನ ಮನಸ್ಥಿತಿ ಬದಲಾಗಬೇಕು. ನನಗೆ ಪರಿಸರದ ಬಗ್ಗೆ ಒಲವು ಮೂಡಲು ಕಾರಣ ನನ್ನ ಅಜ್ಜ ವೃತ್ತಿಯಲ್ಲಿ ಕೃಷಿಕರಾಗಿರುವ ಗುಡಿಹಾಳ ಅಮರಣ್ಣ, ಮತ್ತು ತಂದೆ ಡಾ. ಅಮರಗುಂಡಪ್ಪ, ಮತ್ತು ನನ್ನ ಶಾಲೆಯ ಶಿಕ್ಷಕರು ಹೇಳಿಕೊಟ್ಟ ಪಾಠವೇ ಪ್ರೇರಣೆ ಎನ್ನುತ್ತಾನೆ.

ಬಾಲಕನ ಈ ಪರಿಸರ ಪ್ರೇಮಕ್ಕೆ ಇಡೀ ಕುಟುಂಬವೇ ಸಾತ್ ನೀಡುತ್ತಿದೆ. ಆರೋಗ್ಯಕರ ಜೀವನ ನಡೆಸಲು ಪರಿಸರ ಮುಖ್ಯ ಎಂಬ ಅರಿವು ಈ ಬಾಲಕನಂತೆ ಎಲ್ಲರಲ್ಲೂ ಒಡಮೂಡಿದರೆ, ಭುವಿ ಸ್ವರ್ಗವಾಗುತ್ತದೆ.

About The Author