ಪ್ರತೀ ವರ್ಷ ಎಷ್ಟು ನಾಣ್ಯಗಳನ್ನು ಮುದ್ರಿಸಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಇದರ ನಂತರ, ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ನಿರ್ದೇಶಿಸುತ್ತದೆ. ನಂತರ ಭಾರತೀಯ ರಿಸರ್ವ್ ಬ್ಯಾಂಕ್ ನಾಣ್ಯಗಳನ್ನು ಮುದ್ರಿಸುತ್ತದೆ.
ನಾಣ್ಯ ಅಥವಾ ನೋಟು ಸ್ಥಗಿತಗೊಂಡಿದ್ದರೂ ಅಥವಾ ಬಿಡುಗಡೆ ಪ್ರಕ್ರಿಯೆಯಲ್ಲಿದ್ದರೂ, ಆರ್‌ಬಿಐ ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆಗ ಮಾತ್ರ ಭಾರತೀಯ ರಿಸರ್ವ್ ಬ್ಯಾಂಕ್ ನಾಣ್ಯಗಳು ಅಥವಾ ನೋಟುಗಳನ್ನು ನಿಷೇಧಿಸಬಹುದು.
ಸದ್ಯ ದಪ್ಪದಾಗಿರುವ ಹಳೆಯ 5 ರೂಪಾಯಿ ನಾಣ್ಯಗಳನ್ನು ಆರ್‌ಬಿಐ ನಿಷೇಧಿಸಿದೆ ಎನ್ನುವಂತಹ ಸುದ್ದಿ ಹರಿದಾಡುತ್ತಿದೆ. ವರದಿಗಳ ಪ್ರಕಾರ ಈ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ. ಇನ್ನೂ ಕೆಲ ವರದಿಗಳ ಪ್ರಕಾರ ಈ ನಾಣ್ಯಗಳ ತಯಾರಿಕೆಯನ್ನು ಸರ್ಕಾರ ನಿಲ್ಲಿಸಿದೆ ಎನ್ನಲಾಗದೆ. ಅದರ ಚಲಾವಣೆ ಮುಂದುವರಿಯಲು ಅಡ್ಡಿ ಇಲ್ಲ ಎನ್ನಲಾಗಿದೆ.
ಸದ್ಯ ಎರಡು ಮೂರು ರೀತಿಯ 5 ರೂ ನಾಣ್ಯಗಳು ಚಲಾವಣೆಯಲ್ಲಿವೆ. ಗೋಲ್ಡ್ ಕಾಯಿನ್ ಎಂದು ಜನಪ್ರಿಯವಾಗಿರುವ, ನಿಕಲ್ ಮತ್ತು ಬ್ರಾಸ್ನಿಂದ ಮಾಡಿರುವ 5 ರೂ ನಾಣ್ಯ ಇದೆ. ಹೆಚ್ಚು ವ್ಯಾಸವಿರುವ ಅದೇ ಲೋಹಗಳಿಂದ ಮಾಡಿದ ನಾಣ್ಯವೂ ಇದೆ. ಹಿಂದೆ ತಯಾರಿಸಿ ಮಾರುಕಟ್ಟೆಗೆ ಬಿಡಲಾಗಿದ್ದ ದಪ್ಪದಾಗಿರುವ 5 ರೂ ನಾಣ್ಯವೂ ಚಲಾವಣೆಯಲ್ಲಿದೆ.
ಇಷ್ಟು ವಿಧವಾದ 5 ರೂಪಾಯಿ ನಾಣ್ಯಗಳ ಪೈಕಿ ದಪ್ಪದಾಗಿರುವ 5 ರೂಪಾಯಿ ನಾಣ್ಯದ ತಯಾರಿಕೆಯನ್ನು ಆರ್‌ಬಿಐ ನಿಲ್ಲಿಸಿದೆ. ಅದರ ಚಲಾವಣೆಯನ್ನೂ ನಿಲ್ಲಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆರ್‌ಬಿಐ ಅಧಿಕೃತ ಹೇಳಿಕೆ ಬಂದಿಲ್ಲ. ವರದಿಯ ಪ್ರಕಾರ ದಪ್ಪಗಿರುವ 5 ರೂಪಾಯಿ ನಾಣ್ಯ ಕರಗಿಸಿ ಅದರಿಂದ 5 ಶೇವಿಂಗ್ ಬ್ಲೇಡ್‌ಗಳನ್ನು ತಯಾರಿಸಬಹುದು. ಒಂದೊಂದು ಬ್ಲೇಡ್ ಅನ್ನೂ 2 ರೂಪಾಯಿಗೆ ಮಾರಾಟ ಮಾಡಿದ್ರೂ 10 ರೂಪಾಯಿ ಆಗುತ್ತದೆ. ಹೀಗಾಗಿ, ನಾಣ್ಯದ ನಿಜ ಮೌಲ್ಯವು ಅದರ ಮುಖಬೆಲೆಗಿಂತ ಹೆಚ್ಚೇ ಇರುತ್ತದೆ. ಇದು ನಿಯಮಕ್ಕೆ ವಿರುದ್ಧವಾದುದು ಎನ್ನಲಾಗುತ್ತಿದೆ.
ಇನ್ನೊಂದು ವರದಿಯ ಪ್ರಕಾರ, 5 ರೂಪಾಯಿ ನಾಣ್ಯಗಳು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಅಲ್ಲಿ ಇವುಗಳಿಂದ ರೇಜರ್ ಬ್ಲೇಡ್‌ಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ಒಂದು ನಾಣ್ಯದಿಂದ ಅಲ್ಲಿ ಆರು ಬ್ಲೇಡ್‌ಗಳನ್ನ ತಯಾರಿಸುತ್ತಿರುವುದು ಗೊತ್ತಾಗಿದೆ. ಹಾಗಾಗಿ ಈ ನಾಣ್ಯಗಳನ್ನು ನಿಲ್ಲಿಸಲು ಆರ್‌ಬಿಐ ಮುಂದಾಗಿದೆ ಎನ್ನಲಾಗಿದೆ.


