ಒಂದು ಪೆನ್ನಿಗಾಗಿ ‘ಕಣ್ಣು’ ಕಳ್ಕೊಂಡ 5ನೇ ಕ್ಲಾಸ್ ವಿದ್ಯಾರ್ಥಿ!!!

ಶಾಲಾ ಆವರಣದಲ್ಲಿ ನಡೆಯುವ ಮಕ್ಕಳ ನಡುವಿನ ಸಣ್ಣಪುಟ್ಟ ಗಲಾಟೆಗಳು ಸಾಮಾನ್ಯ. ಆದರೆ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಗ್ರಾಮದ ಮೊರಬದ ತೋಟದ ವಸತಿ ಶಾಲೆಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ.

ಪೆನ್ನಿನ ವಿಚಾರಕ್ಕೆ ಜಗಳವಾಡಿದ ಇಬ್ಬರು ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಸಂಭವಿಸಿದೆ. ಈ ವೇಳೆ 1ನೇ ತರಗತಿಯ ವಿದ್ಯಾರ್ಥಿಯು 5ನೇ ತರಗತಿಯ ವಿದ್ಯಾರ್ಥಿಯ ಕಣ್ಣಿಗೆ ಕಟ್ಟಿಗೆಯಿಂದ ಹೊಡೆದ ಪರಿಣಾಮ, ವಿದ್ಯಾರ್ಥಿ ತನ್ನ ಕಣ್ಣು ಗುಡ್ಡೆಯನ್ನೇ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ.

ಶಾಲೆಯಲ್ಲಿ 1ನೇ ತರಗತಿ ಓದುತ್ತಿರುವ ಭೀಮಪ್ಪ ಹಾಗೂ 5ನೇ ತರಗತಿಯ ವಿದ್ಯಾರ್ಥಿ ಸಮರ್ಥ ನಡುವೆ ಪೆನ್ನಿನ ವಿಷಯದಲ್ಲಿ ಜಗಳ ಉಂಟಾಗಿದೆ. ಭೀಮಪ್ಪನು ನೀಡಿದ್ದ ಪೆನ್ ವಾಪಸ್ಸು ಕೇಳಿದ ವೇಳೆ ಮಾತಿನ ಚಕಮಕಿಯಿಂದ ಗಲಾಟೆ ಉಂಟಾಗಿದೆ. ಭೀಮಪ್ಪ ಕಟ್ಟಿಗೆಯಿಂದ ಸಮರ್ಥನ ಬಲಗಣ್ಣಿಗೆ ಬಲವಾಗಿ ಹೊಡೆದಿದ್ದಾನೆ.

ಗಂಭೀರ ಗಾಯಗೊಂಡ ಸಮರ್ಥನನ್ನು ತಕ್ಷಣವೇ ಬೆಳಗಾವಿ ಜಿಲ್ಲೆಯ ಅಥಣಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾದ ಗಾಯದಿಂದಾಗಿ ವೈದ್ಯರು ಬಲಗಣ್ಣಿನ ಕಣ್ಣು ಗುಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಬೇಕಾಯಿತು. ಈ ಘಟನೆ ಮಗನನ್ನು ಬಲಗಣ್ಣು ಕಳೆದುಕೊಳ್ಳುವ ಸ್ಥಿತಿಗೆ ತಳ್ಳಿರುವುದರಿಂದ ಪೋಷಕರು ಕಂಗಾಲಾಗಿದ್ದಾರೆ.

ಘಟನೆಯ ಬಗ್ಗೆ ಮುಖ್ಯ ಶಿಕ್ಷಕಿ ಜಯಶ್ರೀ ನಡುವಿನಕೇರಿ ಹಾಗೂ ಅತಿಥಿ ಶಿಕ್ಷಕಿ ಶಿಲ್ಪಾ ಅಂಬಿಗೆ ಮಾಹಿತಿ ನೀಡಲಾಗಿದೆ. ಆದರೆ ಸ್ಥಳೀಯರ ಪ್ರಕಾರ ಶಿಕ್ಷಕರು ಈ ಗಂಭೀರ ಘಟನೆಯನ್ನು ಲಘುವಾಗಿ ಪರಿಗಣಿಸಿದ್ದಾರೆ ಎಂಬ ನಿರ್ದೇಶನೆಗಳು ಕೇಳಿಬಂದಿವೆ.

ಇದರಿಂದ ಪೋಷಕರು ಮತ್ತು ಗ್ರಾಮಸ್ಥರು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಅವರಿಗೆ ದೂರು ಸಲ್ಲಿಸಿ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಸದ್ಯ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಮುಖ್ಯ ಶಿಕ್ಷಕಿ ಜಯಶ್ರೀ ಹಾಗೂ ಅತಿಥಿ ಶಿಕ್ಷಕಿ ಶಿಲ್ಪಾ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಎಸಿ ಶ್ವೇತಾ ಬೀಡಿಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author