ಚಿನ್ನಾಭರಣ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಜೂನ್ 6ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಹಂತ ಹಂತವಾಗಿ ಇಳಿಕೆಯಾಗುತ್ತಿದ್ದ ಚಿನ್ನದ ದರ ಇಂದು ಮತ್ತಷ್ಟು ಕುಸಿತ ಕಂಡಿದೆ. ಕಳೆದ ಮೇ 30ರಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 15,784 ರೂಪಾಯಿಗಳಿದ್ದರೆ, ಇದೀಗ ಅದು 15,273 ರೂಪಾಯಿಗಳಿಗೆ ಇಳಿದಿದೆ. ಇದರೊಂದಿಗೆ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 3,000 ರೂಪಾಯಿಗಳಷ್ಟು ಇಳಿಕೆ ದಾಖಲಾಗಿದೆ.
ಇದೇ ರೀತಿ, ಆಭರಣ ಚಿನ್ನ ಎಂದೇ ಕರೆಯಲಾಗುವ 22 ಕ್ಯಾರಟ್ ಚಿನ್ನದ ದರದಲ್ಲೂ ಭಾರೀ ಇಳಿಕೆ ಕಂಡುಬಂದಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 2,750 ರೂಪಾಯಿಗಳಷ್ಟು ಕಡಿಮೆಯಾಗಿದ್ದು, ಒಂದು ಗ್ರಾಂ ಚಿನ್ನದ ಬೆಲೆ 14,000 ರೂಪಾಯಿಗಳಿಗೆ ತಲುಪಿದೆ. ಕಳೆದ ಎಂಟು ದಿನಗಳಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 4,910 ರೂಪಾಯಿಗಳ ಇಳಿಕೆಯಾಗಿದ್ದರೆ, 22 ಕ್ಯಾರಟ್ ಚಿನ್ನದ ದರವು 4,500 ರೂಪಾಯಿಗಳಷ್ಟು ಕಡಿಮೆಯಾಗಿದೆ.
ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಕುಸಿತ ಕಂಡುಬಂದಿದ್ದು, ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಸುಮಾರು 10 ಸಾವಿರ ರೂಪಾಯಿಗಳ ಇಳಿಕೆಯಾಗಿರುವ ಪರಿಣಾಮ ಪ್ರಸ್ತುತ ಬೆಳ್ಳಿ ದರ 2.65 ಲಕ್ಷ ರೂಪಾಯಿಗಳಿಗೆ ತಲುಪಿದೆ. ಒಟ್ಟಾರೆ, ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕಂಡಿರುವ ಈ ಭಾರೀ ಇಳಿಕೆ ಆಭರಣ ಖರೀದಿದಾರರಿಗೆ ಹಾಗೂ ಹೂಡಿಕೆದಾರರಿಗೆ ನಿರಾಳತೆ ತಂದಿದ್ದು, ಮುಂದಿನ ದಿನಗಳಲ್ಲಿ ಬೆಲೆಗಳ ಚಲನವಲನ ಹೇಗಿರಲಿದೆ ಎಂಬುದರತ್ತ ಮಾರುಕಟ್ಟೆಯ ಗಮನ ಕೇಂದ್ರೀಕೃತವಾಗಿದೆ.




