ಕರ್ನಾಟಕ ಆಡಳಿತ ಸುಧಾರಣಾ ಆಯೋಗ – 2 (ಕೆಎಆರ್‌ಸಿ-2) ತನ್ನ 9ನೇ ವರದಿಯಲ್ಲಿ ರಾಜ್ಯದ ಏಳು ಸರ್ಕಾರಿ ಸಂಸ್ಥೆಗಳನ್ನು ಮುಚ್ಚುವಂತೆ ಹಾಗೂ ಒಂಬತ್ತು ಸಂಸ್ಥೆಗಳನ್ನು ವಿಲೀನಗೊಳಿಸಲು ಶಿಫಾರಸು ಮಾಡಿದೆ. ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದ ಆಯೋಗವು ಈ ವರದಿಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಸಲ್ಲಿಸಿತು.
ಒಟ್ಟು 449 ಶಿಫಾರಸುಗಳಿರುವ ಈ ವರದಿ, ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸುಧಾರಣೆಗೆ ದೊಡ್ಡ ಹೆಜ್ಜೆ ಇಟ್ಟಿದೆ. ಇದುವರೆಗೆ ಈ ಆಯೋಗವು ಒಟ್ಟು 5,677 ಶಿಫಾರಸುಗಳನ್ನ ಸರ್ಕಾರಕ್ಕೆ ನೀಡಿದ್ದು, ಇದರ ಪೈಕಿ 1,852 ಶಿಫಾರಸುಗಳನ್ನು ಈಗಾಗಲೇ ಜಾರಿಗೆ ತರುವಲ್ಲಿ ಯಶಸ್ವಿಯಾಗಲಾಗಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ. ಮುಚ್ಚಲು ಶಿಫಾರಸು ಮಾಡಲಾದ ಏಳು ಘಟಕಗಳಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಮಂಡಳಿಯೂ ಸೇರಿದೆ. ಇದಕ್ಕಾಗಿ ಸರ್ಕಾರ ಇತ್ತೀಚೆಗೆ ಶರಣಪ್ಪ ಸಲಾಡಪುರ್ ಅವರನ್ನ ಅಧ್ಯಕ್ಷರನ್ನಾಗಿ ನೇಮಿಸಿತ್ತು.
ಮುಚ್ಚಲು ಶಿಫಾರಸು ಮಾಡಲಾದ ಏಳು ಸಂಸ್ಥೆಗಳು ಅಂದ್ರೆ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ಕರ್ನಾಟಕ ಸಹಕಾರಿ ಕೋಳಿ ಸಾಕಣೆ ಕೇಂದ್ರ, ಕರ್ನಾಟಕ ಪಲ್ಪ್‌ವುಡ್ ಲಿಮಿಟೆಡ್, ಕರ್ನಾಟಕ ರಾಜ್ಯ ಆಗ್ರೋ ಕಾರ್ನ್ ಪ್ರಾಡಕ್ಟ್ಸ್ ಲಿಮಿಟೆಡ್, ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಮತ್ತು ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್‌ಗಳನ್ನು ಮುಚ್ಚಲು ಶಿಫಾರಸು ಮಾಡಲಾಗಿದೆ.
ಇನ್ನು ವಿಲೀನಕ್ಕೆ ಶಿಫಾರಸು ಮಾಡಲಾದ ಒಂಬತ್ತು ಘಟಕಗಳು ಅಂದ್ರೆ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮ ಲಿಮಿಟೆಡ್, ಆಹಾರ ಕರ್ನಾಟಕ ಲಿಮಿಟೆಡ್, ಬೆಂಗಳೂರು ಸಬರ್ಬನ್ ರೈಲ್ವೆ ಕಂಪನಿ ಲಿಮಿಟೆಡ್ , ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಲಿಮಿಟೆಡ್, ಮೈಸೂರು ಕ್ರೋಮ್ ಟ್ಯಾನಿಂಗ್ ಕಂಪನಿ ಲಿಮಿಟೆಡ್, ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ರೇಷ್ಮೆ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಕಮಾಂಡ್ ಏರಿಯಾ ಅಭಿವೃದ್ಧಿ ಪ್ರಾಧಿಕಾರ.
ಆಯೋಗವು ವಿವಿಧ ಇಲಾಖೆಗಳಾದ್ಯಂತ 82 ಮಂಡಳಿಗಳು ಮತ್ತು ನಿಗಮಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದೆ. 2001 ರಲ್ಲಿ ಹಾರ್ನಹಳ್ಳಿ ರಾಮಸ್ವಾಮಿ ನೇತೃತ್ವದ ಮೊದಲ ಕೆಎಆರ್‌ಸಿ, ಮದ್ಯ ಮಾರಾಟದಿಂದ ಸರ್ಕಾರಕ್ಕೆ ಲಾಭವಾಗುವ ಸಂಘರ್ಷವನ್ನು ಆಯೋಗವು ಗಮನಿಸಿದೆ, ಆದರೆ ಮಂಡಳಿಯು ಜಾಗೃತಿಯ ಮೂಲಕ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ. ಆದ್ದರಿಂದ, ಮಂಡಳಿಯನ್ನು ಮುಚ್ಚಲು ಶಿಫಾರಸು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ