ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಚಿತ್ರ ಜೂನ್ 10 ರಂದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಕೆಜಿಎಫ್-೨ ಚಿತ್ರದ ನಂತರ ‘777 ಚಾರ್ಲಿ’ ಕನ್ನಡ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗಿದೆ. ಇನ್ನು ಸಿನಿಮಾ ತನ್ನ ಟ್ರೇಲರ್ ನಿಂದ ಭಾರತೀಯ ಚಿತ್ರರಂಗದಲ್ಲಿ ಹಲವರ ಗಮನ ಸೆಳೆದಿದೆ. ಈ ಸಿನಿಮಾವನ್ನು ಇತರೆ ಭಾಷೆಗಳ ಅಲ್ಲಿನ ಸ್ಟಾರ್‌ಗಳು ಬಿಡುಗಡೆ ಮಾಡುತ್ತಿದ್ದಾರೆ.
ತೆಲುಗಿನ ಖ್ಯಾತ ನಟ, ನಿರ್ಮಾಪಕ ರಾಣಾ ದಗ್ಗುಬಾಟಿ ‘ಚಾರ್ಲಿ’ ಸಿನಿಮಾವನ್ನು ನೋಡಿ ಮೆಚ್ಚಿಕೊಂಡು ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದರು. ಈಗ ಅವರ ನಿರ್ಮಾಣ ಸಂಸ್ಥೆ ‘ಸುರೇಶ್ ಪ್ರೊಡಕ್ಷನ್ ಹೌಸ್’ನಿಂದ ‘ಚಾರ್ಲಿ’ ಸಿನಿಮಾವನ್ನು ತೆಲುಗಿನಲ್ಲಿ ರಿಲೀಸ್ ಮಾಡುತ್ತಿದ್ದಾರೆ.
ಇನ್ನು ತಮಿಳಿನ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ‘ಚಾರ್ಲಿ’ ಚಿತ್ರವನ್ನು ನೋಡಿ ಮೆಚ್ಚಿಕೊಂಡ ನಂತರ ತಮ್ಮ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆ ಮಾಡುತ್ತಿದ್ದಾರೆ.
ಮಲಯಾಳಂ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ‘ಚಾರ್ಲಿ’ ಸಿನಿಮಾವನ್ನು ಮಲಯಾಳಂನಲ್ಲಿ ತಮ್ಮ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆ ಮಾಡುತ್ತಿದ್ದಾರೆ. ‘ಕೆಜಿಎಫ್-2’ ಚಿತ್ರವನ್ನು ಸಹ ಇವರೇ ಮಲಯಾಳಂ ನಲ್ಲಿ ಬಿಡುಗಡೆ ಮಾಡಿದ್ದರು.
ರಕ್ಷಿತ್ ಶೆಟ್ಟಿ ನಟನೆಯ, ಕಿರಣ್ ರಾಜ್ ಕೆ ನಿರ್ದೇಶನದ ಈ ಸಿನಿಮಾ ಜೂ.10ರಂದು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ, ಸಂಗೀತಾ ಶೃಂಗೇರಿ, ತಮಿಳಿನ ಬಾಬ್ಬಿ ಸಿಂಹ ನಟಿಸಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ