ಎಂಟನೇ ವೇತನ ಆಯೋಗಕ್ಕೆ ಸಂಬಂಧಿಸಿದ ಮಹತ್ವದ ಸಭೆ ಚಂಡೀಗಢದಲ್ಲಿ ಆರಂಭಗೊಂಡಿದೆ. ಸೆಪ್ಟೆಂಬರ್ 16 ರಿಂದ 18 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ, ಆಯೋಗದ ಸದಸ್ಯರು ವಿವಿಧ ನೌಕರರ ಸಂಘಟನೆಗಳು ಹಾಗೂ ಪಿಂಚಣಿದಾರರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ವಿವಿಧ ಬೇಡಿಕೆಗಳ ಕುರಿತು ಅಭಿಪ್ರಾಯ ಕ್ರೋಢೀಕರಿಸುವ ಕೆಲಸವನ್ನು ಆಯೋಗ ಮಾಡುತ್ತಿದೆ.
ಹತ್ತು ವರ್ಷಗಳ ಹಿಂದೆ ಏಳನೇ ವೇತನ ಆಯೋಗದ ಮುಂದೆಯೂ ಇಡಲಾಗಿದ್ದ ಪ್ರಮುಖ ಬೇಡಿಕೆಯೊಂದು, ಈಗ ಎಂಟನೇ ವೇತನ ಆಯೋಗದ ಮುಂದೆಯೂ ಮುನ್ನೆಲೆಗೆ ಬಂದಿದೆ. ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಮಾಡುವ ಅವಧಿಯನ್ನು ಹತ್ತು ವರ್ಷದಿಂದ ಐದು ವರ್ಷಕ್ಕೆ ಇಳಿಸಬೇಕು ಎನ್ನುವುದು ನೌಕರರ ಸಂಘಟನೆಯ ಪ್ರಮುಖ ಹಾಗೂ ಪ್ರಬಲ ಬೇಡಿಕೆಯಾಗಿದೆ. ಹತ್ತು ವರ್ಷ ಕಾಯುವುದರಿಂದ ಹಣದುಬ್ಬರ ಹೆಚ್ಚಾಗಿ ವೇತನದ ಮೌಲ್ಯ ಕುಸಿಯುತ್ತದೆ ಎಂದು ಸಂಘಟನೆಗಳು ವಾದಿಸುತ್ತಿವೆ.
ಭಾರತೀಯ ಪೆನ್ಸನರ್ಸ್ ಸಮಾಜ ಹಾಗೂ ರೈಲ್ವೆ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಮಾಜ ಸೇರಿದಂತೆ ಹಲವು ಸಂಘಟನೆಗಳು ಆಯೋಗಕ್ಕೆ ಅಧಿಕೃತ ಮನವಿ ಸಲ್ಲಿಸಿವೆ. ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ವೇತನ ಹಾಗೂ ಪಿಂಚಣಿ ಪರಿಷ್ಕರಣೆ ಆಗಬೇಕು ಎಂದು ಆಗ್ರಹಿಸಲಾಗಿದೆ. ದೇಶದ ಜಿಡಿಪಿ ಹಾಗೂ ತೆರಿಗೆ ಆದಾಯ ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಐದು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಿದರೆ ಬರುವ ಹೆಚ್ಚುವರಿ ವೆಚ್ಚವನ್ನು ಸರ್ಕಾರ ಸುಲಭವಾಗಿ ಭರಿಸಬಹುದು ಎಂಬುದು ನೌಕರರ ವಾದವಾಗಿದೆ.
ಈ ಬಾರಿಯಾದರೂ ತಮ್ಮ ಬಹುಕಾಲದ ಬೇಡಿಕೆ ಈಡೇರಬಹುದು ಎಂಬ ದೃಢವಾದ ಆಶಾಭಾವನೆಯನ್ನು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಹೊಂದಿದ್ದಾರ ಮುಂದೇನಾಗುತ್ತೆಂದು ಕಾದು ನೋಡೋಣ.




