ಜಿಹಾದಿ–ಕಾಂಗ್ರೆಸ್ ಹೋಲಿಕೆ – ಛಲವಾದಿ ಮಾತು ವೈರಲ್!

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಹಾಗೂ ಮೆರವಣಿಗೆಯ ಸಂದರ್ಭದಲ್ಲಿ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಸ್ಲಿಂ ಸಮುದಾಯದಲ್ಲಿ ದಾರಿ ತಪ್ಪಿದವರು ಜಿಹಾದಿ ಹೇಗಾಗುತ್ತಾರೋ, ಅದೇ ರೀತಿ ಹಿಂದೂತ್ವದಲ್ಲಿ ದಾರಿ ತಪ್ಪಿದವರು ಕಾಂಗ್ರೆಸ್ಸಿಗರು ಆಗುತ್ತಾರೆ ಎಂದು ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸಮಾಜದಲ್ಲಿ ಹಿಂದೂ-ಮುಸ್ಲಿಂ ಎಲ್ಲರೂ ಅಣ್ಣ-ತಮ್ಮಂದಿರಂತೆ ಇದ್ದು, ಎರಡೂ ಸಮುದಾಯಗಳಲ್ಲಿ ಒಳ್ಳೆಯವರು ಹಾಗೂ ಕೆಟ್ಟವರು ಇದ್ದಾರೆ ಎಂದಿದ್ದಾರೆ. ಆದರೆ ಮುಸ್ಲಿಂ ಸಮುದಾಯದಲ್ಲಿ ದಾರಿ ತಪ್ಪಿದ ವ್ಯಕ್ತಿ ಜಿಹಾದಿ ಆಗುವಂತೆ, ಹಿಂದೂತ್ವದ ವಿಚಾರದಲ್ಲೂ ದಾರಿ ತಪ್ಪಿದವರು ಕಾಂಗ್ರೆಸ್ಸಿಗರು ಆಗುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ತನ್ನ ನಡವಳಿಕೆಯನ್ನು ಬದಲಿಸಿಕೊಂಡು ದೇಶಭಕ್ತಿ ಮೆರೆಯಬೇಕು ಎಂದು ಕಿಡಿಕಾರಿದ್ದಾರೆ.

ಇನ್ನು ಮದ್ದೂರಿನ ಪೇಟೆ ಬೀದಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಸಾಗಿದ ಸಾಮೂಹಿಕ ಗಣೇಶ ಮೆರವಣಿಗೆಯಲ್ಲಿ ಒಟ್ಟು 108 ಗಣೇಶ ಮೂರ್ತಿಗಳು ಹಾಗೂ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು. ಮಸೀದಿ ಹಾಗೂ ದರ್ಗಾ ಇರುವ ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಡೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಆದರೆ ಈ ಬಿಗಿ ಭದ್ರತೆಯ ನಡುವೆಯೂ, ಮೆರವಣಿಗೆಯು ದರ್ಗಾ ಬಳಿಗೆ ಆಗಮಿಸುತ್ತಿದ್ದಂತೆ ಕೆಲ ಹಿಂದೂ ಕಾರ್ಯಕರ್ತರು ದರ್ಗಾ ಮುಂಭಾಗದ ರಸ್ತೆಯಲ್ಲೇ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿದ್ದು ಸ್ಥಳದಲ್ಲಿ ತುಸು ಬಿಗುವಿನ ವಾತಾವರಣ ನಿರ್ಮಾಣವಾಗಲು ಕಾರಣವಾಯಿತು. ಛಲವಾದಿ ನಾರಾಯಣಸ್ವಾಮಿ ಅವರ ಈ ವಿವಾದಾತ್ಮಕ ಹೇಳಿಕೆ ಹಾಗೂ ಮದ್ದೂರಿನಲ್ಲಿ ನಡೆದ ಈ ಬೆಳವಣಿಗೆಯಿಂದಾಗಿ ರಾಜಕೀಯ ವಲಯದಲ್ಲಿ ಮಾತಿನ ಚಕಮಕಿ ಜೋರಾಗಿ ಸದ್ದು ಮಾಡ್ತಿದೆ ಎಂದು ಹೇಳಬಹುದು.

About The Author