Thursday, November 21, 2024

Latest Posts

Political News: ಜಯನಗರಕ್ಕೂ ಅನುದಾನ ಕೊಡಿ-ಸಿ.ಕೆ.ರಾಮಮೂರ್ತಿ ಮನವಿ

- Advertisement -

Political News: ಬೆಂಗಳೂರು: ನಗರದ ಎಲ್ಲ ಶಾಸಕರನ್ನು ಸಮಾನವಾಗಿ ಪರಿಗಣಿಸಿ ತಮ್ಮ ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡಬೇಕೆಂದು ಜಯನಗರ ಕ್ಷೇತ್ರದ ಶಾಸಕ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಕೆ.ರಾಮಮೂರ್ತಿ ಅವರು ಮನವಿ ಮಾಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ನೋಡಿದ್ದೇನೆ. ಬೆಂಗಳೂರಿನ ಜಯನಗರ ಹೊರತುಪಡಿಸಿ 27 ವಿಧಾನಸಭಾ ಕ್ಷೇತ್ರಕ್ಕೆ 270 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. 28ನೇ ಕ್ಷೇತ್ರ ಜಯನಗರ ಕ್ಷೇತ್ರಕ್ಕೆ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ವಿವರಿಸಿದರು.

ಜಯನಗರ ಕ್ಷೇತ್ರವು ಅತಿ ಹೆಚ್ಚು ತೆರಿಗೆ ಪಾವತಿಸುತ್ತಿದೆ. ಕಳೆದೆರಡು ವರ್ಷಗಳಲ್ಲಿ ಸುಮಾರು 565 ಕೋಟಿ ರೂ. ತೆರಿಗೆ ಕಟ್ಟಿದ್ದೇವೆ ಎಂದು ದಾಖಲೆ ಪ್ರದರ್ಶಿಸಿದರು. ಇಷ್ಟು ತೆರಿಗೆ ಪಾವತಿಸಿದರೂ 10 ಕೋಟಿಯಷ್ಟೂ ಅನುದಾನ ನೀಡದೆ ಇರುವುದು ಸರಿಯಲ್ಲ ಎಂದು ನುಡಿದರು.

ಜಯನಗರವು 70 ವರ್ಷಗಳ ಇತಿಹಾಸ ಹೊಂದಿದೆ. ಎಲ್ಲವೂ 100 ಅಡಿ ರಸ್ತೆಗಳು. ಎಲ್ಲ ರಸ್ತೆಗಳು ಹಾಳಾಗಿ ಗುಂಡಿ ಬಿದ್ದಿವೆ. ಅಪಘಾತಗಳು ಆಗುತ್ತಿವೆ. ಒಮ್ಮೆ ಬನ್ನಿ ಎಂದರೂ ಬರುತ್ತಿಲ್ಲ ಎಂದು ತಿಳಿಸಿದರು. ಆದರೆ, ಜಯನಗರಕ್ಕೆ ಬರುತ್ತಿಲ್ಲ; ಯಾರು ಅಡ್ಡ ಹಾಕುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

ನಿಮ್ಮ ಮನೆಗೆ, ಕಚೇರಿಗೆ ಬಂದು ಏಳೆಂಟು ಮನವಿಪತ್ರ ಕೊಟ್ಟಿದ್ದೇವೆ. ಆದರೆ ಕವಡೆ ಕಾಸನ್ನೂ ಕೊಟ್ಟಿಲ್ಲ; ನಾವು ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದರು. ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಕೂಡ ತಾರತಮ್ಯ ಮಾಡದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ವಿವರಿಸಿದರು.

ಬ್ರ್ಯಾಂಡ್ ಬೆಂಗಳೂರು, ಪಾಲಿಕೆ 5 ಭಾಗವಾಗಿ ವಿಂಗಡನೆ ಕುರಿತು ಸದನದಲ್ಲಿ ಮಾಹಿತಿ ಕೇಳಿದ್ದೆ. ಅನುದಾನ ಕೊಡುವುದಾಗಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಅಶೋಕ್ ಅವರು ಕೂಡ ಧ್ವನಿಗೂಡಿಸಿ ಅನುದಾನ ನೀಡಲು ಕೋರಿದ್ದರು. ಈಗ ಎಲ್ಲರಿಗೂ ಹಣ ಕೊಟ್ಟರೂ ನನಗೊಬ್ಬನಿಗೇ ಅನುದಾನ ನೀಡಿಲ್ಲ ಎಂದರು.

ಈ ವಿಷಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ಮಿತ್ರರ ಜೊತೆ ಮಾತನಾಡಿ ಮುಂದಿನ ನಡೆಯ ಕುರಿತು ಚಿಂತಿಸಲಿದ್ದೇವೆ. ದಯಮಾಡಿ ಉಪ ಮುಖ್ಯಮಂತ್ರಿಗಳು ಎಲ್ಲ ಶಾಸಕರೂ ಒಂದೇ ಎಂದೇ ಪರಿಗಣಿಸಿ ಅನುದಾನ ನೀಡಬೇಕೆಂದು ವಿನಂತಿಸಿದರು. ಜಯನಗರಕ್ಕೆ ಹೆಚ್ಚಿನ ಅನುದಾನ ಕೊಡಲು ಕೋರಿದರು.

ಬೆಂಗಳೂರು ದಕ್ಷಿಣ ಜಿಲ್ಲಾ ವಕ್ತಾರ ಸಂಕೀರ್ತ್, ಬೆಂಗಳೂರು ಉತ್ತರ ಜಿಲ್ಲಾ ವಕ್ತಾರ ಕಾಂತಿ ಶೆಟ್ಟಿ ಅವರು ಉಪಸ್ಥಿತರಿದ್ದರು.

- Advertisement -

Latest Posts

Don't Miss