Movie News: ಸಿನಿಮಾ ಚೆನ್ನಾಗಿದ್ದರೆ ಮನಸ್ಸಿಗೆ ಹಿಡಿಸಿದರೆ ಯಾವ ಭಾಷೆಯಾದರೇನು? ಯಾವ ಕಲಾವಿದನಾದರೇನು? ಜನ ಪ್ರೀತಿಯಿಂದ ಅಪ್ಪಿ, ಒಪ್ಪಿಕೊಳ್ತಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್. ಯೆಸ್, ಯಶ್ ಅಭಿನಯದ ಕೆಜಿಎಫ್ ಮತ್ತು ಕೆಜಿಎಫ್ 2 ಸಿನಿಮಾವನ್ನು ಜನ ಇಷ್ಟಪಟ್ಟಿದ್ದರು. ಇಡೀ ದೇಶ ಮಾತ್ರವಲ್ಲ, ವಿದೇಶದಲ್ಲೂ ಕೆಜಿಎಫ್ ದಾಖಲೆ ಬರೆದಿತ್ತು. ಇಲ್ಲಿಯವರೆಗೂ ಕೆಜಿಎಫ್ ದಾಖಲೆ ಮುರಿಯುವ ಸಿನಿಮಾ ಬಂದಿರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಯಾವಾಗ ಪುಷ್ಪ ಬಂತೋ, ಆಗಿನಿಂದಲೂ ಪುಷ್ಪ ಸಿನಿಮಾ ಎಲ್ಲಾ ದಾಖಲೆಗಳನ್ನು ಬೀಟ್ ಮಾಡುತ್ತೆ ಎಂಬ ಲೆಕ್ಕಾಚಾರಗಳು ಶುರುವಾದವು. ಸಿನಿಪಂಡಿತರ ಅನುಭವದ ಮಾತುಗಳು ಕೂಡ ಕೆಜಿಎಫ್ ದಾಖಲೆಯನ್ನು ಪುಷ್ಪ 2 ಮುರಿಯುತ್ತೆ ಅನ್ನುವಂತಾಯ್ತು.
ಹಾಗೆ ನೋಡಿದರೆ, ಮೊದಲಿನಿಂದಲೂ ಕೆಜಿಎಫ್ ವರ್ಸಸ್ ‘ಪುಷ್ಪ’ ಎಂಬ ಮಾತುಗಳೇ ಹರಿದಾಡುತ್ತಿವೆ. ಈ ಮಾತಿಗೆ ಸಾಕಷ್ಟು ಕಾರಣಗಳೂ ಇವೆ ಅನ್ನಿ. ಈ ಎರಡು ಚಿತ್ರಗಳು ಬಿಗ್ ಬಜೆಟ್ ಹೊಂದಿವೆ. ಅಷ್ಟೇ ಅಲ್ಲ, ಎರಡರ ಮಧ್ಯೆ ಸಾಕಷ್ಟು ಸಾಮ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಸುಕುಮಾರ್ ಶಿಷ್ಯ ಚುಚ್ಚಿಬಾಬು ನೀಡಿದ್ದ ಹೇಳಿಕೆ ಕೂಡ ಇದಕ್ಕೆ ಇಂಬು ಕೊಟ್ಟಿತ್ತು. ಸದ್ಯ ‘ಪುಷ್ಪ’-2 ಆರ್ಭಟ ಜೋರಾಗಿರುವುದಂತೂ ಸುಳ್ಳಲ್ಲ ಬಿಡಿ. ಅದಕ್ಕೆ ಉದಾಹರಣೆ, ಇತ್ತೀಚೆಗೆ ಬಿಹಾರದಲ್ಲಿ ನಡೆದ ಟ್ರೇಲರ್ ಇವೆಂಟ್ ಸಾಕ್ಷಿ. ಅಲ್ಲಿ ಸೇರಿದ್ದ ಅಲ್ಲು ಅರ್ಜುನ್ ಫ್ಯಾನ್ಸ್ ಪ್ರೀತಿಯೇ ಈ ಚಿತ್ರ ಮತ್ತೊಂದು ಹೊಸ ದಾಖಲೆ ಬರೆಯುತ್ತೆ ಅಂತ ಹೇಳುತ್ತೆ.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’-2 ಚಿತ್ರ ಈಗಲ್ಲ, ಆರಂಭದಿಂದಲೂ ನಿರೀಕ್ಷೆ ಹುಟ್ಟಿಸಿರೋದು ಸುಳ್ಳಲ್ಲ. ಪುಷ್ಪ 2 ಡಿಸೆಂಬರ್ 5ಕ್ಕೆ ತೆರೆಮೇಲೆ ರಾರಾಜಿಸಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ ಸಿನಿಪ್ರೇಮಿಗಳು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ಲಕ್ಷ ಲಕ್ಷ ಟಿಕೆಟ್ ಹಾಟ್ ಕೇಕ್ ರೀತಿ ಸೇಲ್ ಆಗುತ್ತಿದೆ ಅನ್ನೋದು ವಿಶೇಷ.
ಈ ಚಿತ್ರದ ಟಿಕೆಟ್ ದರವನ್ನು 5, 10 ಪಟ್ ಹೆಚ್ಚಿಸಿದರೂ ಜನ ಸಿನಿಮಾ ನೋಡಲು ಹಿಂದೇಟು ಹಾಕುತ್ತಲೇ ಇಲ್ಲ. ಹೇಗಾದರೂ ಸರಿ, ಎಷ್ಟಾದರೂ ಸರಿ, ಒಂದೊಮ್ಮೆ ಪುಷ್ಪ 2 ಸಿನಿಮಾ ನೋಡಿಬಿಡಬೇಕು ಅನ್ನೋ ಹಪಾಹಪಿಯಲ್ಲೇ ಅಲ್ಲು ಫ್ಯಾನ್ಸ್, ರಶ್ಮಿಕಾ ಫ್ಯಾನ್ಸ್ ಜೊತೆಗೆ ಸಿನಿ ಪ್ರೇಮಿಗಳು ಕಾದಿರೋದಂತೂ ಸುಳ್ಳಲ್ಲ. ಸದ್ಯ ಟಿಕೆಟ್ ಬುಕ್ಕಿಂಗ್ ನೋಡಿದರೆ, ಈ ಸಿನಿಮಾ ಗಳಿಕೆಯಲ್ಲೂ ಹೊಸ ದಾಖಲೆ ಬರೆಯುತ್ತೆ ಅಂತ ಹೇಳಲಾಗುತ್ತಿದೆ. ಇನ್ನು, ಕರ್ನಾಟಕದಲ್ಲಿ ಟಿಕೆಟ್ ದರ ಗಣನೀಯವಾಗಿ ಏರಿಕೆ ಮಾಡಲಾಗಿದೆ. ಹಾಗಾಗಿ ಕೆಲವರು ಟಿಕೆಟ್ ಬುಕ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಏನಾದರೂ ಕಮ್ಮಿ ಮಾಡಿದ್ದಲ್ಲಿ ಟಿಕೆಟ್ ಬುಕ್ ಮಾಡೋಕೆ ಕಾಯುತ್ತಿದ್ದಾರೆ.
ಇದಷ್ಟೇ ಆಗಿದ್ದರೆ ಇಷ್ಟೊಂದು ಹೇಳುವ ಅಗತ್ಯ ಇರುತ್ತಿರಲಿಲ್ಲ. ದೇಶ ವಿದೇಶಗಳಲ್ಲೂ ‘ಪುಷ್ಪ’-2 ಫೀವರ್ ಶುರುವಾಗಿದೆ. ಈಗಾಗಲೇ ಸಾಗರದಾಚೆಯಲ್ಲೂ ಪುಷ್ಪ2 ಕ್ರೇಜ್ ಹೆಚ್ಚಾಗಿದೆ. ಅಲ್ಲೂ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ನೋಡೋಕೆ ಅನಿವಾಸಿ ಭಾರತೀಯರಷ್ಟೇ ಅಲ್ಲ, ವಿದೇಶಿಗರೂ ತಕಥೈ ಅಂತ ಕುಣೀತಿದ್ದಾರೆ ಅಂದರೆ ನಂಬಲೇಬೇಕು. ಸದ್ಯ ಬುಕ್ ಮೈ ಶೋನಲ್ಲಿ ‘ಪುಷ್ಪ’-2 ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಜೋರಾಗಿಯೇ ಇದೆ. ಎಲ್ಲಾ ಭಾಷೆಯಲ್ಲೂ ಟಿಕೆಟ್ ಬುಕ್ಕಿಂಗ್ ಫುಲ್ ಆಗಿದೆ. ತೆಲುಗು ಭಾಷೆಯಲ್ಲಿ ಅತೀ ಹೆಚ್ಚು ಅಂದರೆ 1400 ರು. ಟಿಕೆಟ್ ದರವಿದ್ದರೂ, ಬುಕ್ಕಿಂಗ ಸ್ಪೀಡ್ ಆಗಿದೆ. ತೆಲುಗು ತ್ರಿಡಿ ಟಿಕೆಟ್ ದರ 1800 ರು. ಇದೆ.
ಕನ್ನಡದಲ್ಲಿ ಟಿಕೆಟ್ ರೇಟ್ ದರ 250 ರು.ನಿಂದ 900 ರು.ವರೆಗೆ ಇದೆ. ಮಾಹಿತಿ ಪ್ರಕಾರ ಈಗಾಗಲೇ 12 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿದ್ದು ಅಂದಾಜು 50 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಆಗಿರಬಹುದು ಎನ್ನಲಾಗುತ್ತಿದೆ. ಭಾರತವೊಂದರಲ್ಲೇ ಈ ಚಿತ್ರ ರಿಲೀಸ್ ಮೊದಲೇ 36 ಕೋಟಿ ರೂ. ಬಾಚಿಕೊಂಡಿದೆ ಎಂಬ ಲೆಕ್ಕಾಚಾರಗಳಿವೆ. ಒಂದು ಮಿಲಿಯನ್ ಟಿಕೆಟ್ ಬುಕ್ ಆಗಿರುವ ಬಗ್ಗೆ ಸ್ವತಃ ಬುಕ್ ಮೈ ಶೋ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಸಿಗುತ್ತಿದೆ. ನಿಜಕ್ಕೂ ಇದನ್ನು ಕ್ರೇಜ್ ಅನ್ನದೆ ಮತ್ತೇನು ಅನ್ನಬೇಕು?
ಕಲ್ಕಿ 2898 AD, ಬಾಹುಬಲಿ-2 ಹಾಗೂ KGF- 2 ಸಿನಿಮಾಗಳನ್ನು ಮೀರಿಸಿ ಬುಕ್ ಮೈಶೋನಲ್ಲಿ ಬಹು ಬೇಗ 1 ಮಿಲಿಯನ್ ಟಿಕೆಟ್ ಬುಕ್ ಆಗಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಪುಷ್ಪ’-2 ಕಾರಣವಾಗಿದೆ. ಹೈದರಾಬಾದ್, ಬೆಂಗಳೂರು, ಮುಂಬೈ, ದೆಹಲಿ ಮತ್ತು ಪುಣೆ ಸೇರಿದಂತೆ ದೇಶಾದ್ಯಂತ ಟಿಕೆಟ್ ಬುಕ್ಕಿಂಗ್ ಜೋರಾಗಿದೆ ಎಂದು ಬುಕ್‌ಮೈ ಶೋ ಮುಖ್ಯಸ್ಥ ಆಶಿಶ್ ಸಕ್ಸೇನಾ ಹೇಳಿಕೊಂಡಿದ್ದಾರೆ.
ಅತಿ ವೇಗವಾಗಿ 1 ಮಿಲಿಯನ್ ಟಿಕೆಟ್ ಬುಕ್ ಆಗಿರುವ ಸಿನಿಮಾ ಎನ್ನುವ ದಾಖಲೆ ಈಗ ‘ಪುಷ್ಪ’-2 ಪಾಲಾಗಿದೆ ಅನ್ನೋದು ವಿಶೇಷ. ಸಿನಿಮಾ ಬಿಡುಗಡೆಗೆ ಒಂದು ದಿನ ಬಾಕಿ ಇದೆ. ಇನ್ನೂ ಮತ್ತಷ್ಟು ಬುಕ್ಕಿಂಗ್ ಹೆಚ್ಚಲಿದೆ. ಅಷ್ಟೇ ಅಲ್ಲ, ದಾಖಲೆಯೂ ಆಗಲಿದೆ. ಮುಂದೆ ‘ಪುಷ್ಪ’ರಾಜ್ ಯಾವೆಲ್ಲಾ ದಾಖಲೆಗಳನ್ನು ಅಳಿಸಿ ಹಾಕುತ್ತೆ ಎಂಬುದನ್ನು ಕಾದು ನೋಡಬೇಕಿದೆ. ಮೊದಲ ದಿನವೇ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಬಹುದು ಎಂದು ಸಿನಿಪಂಡಿತರು ವಿಶ್ಲೇಷಣೆ ಮಾಡಿದ್ದಾರೆ. ವಿಶ್ವದಾದ್ಯಂತ ಅಂದಾಜು 11,500 ಸ್ಕ್ರೀನ್‌ಗಳಲ್ಲಿ ‘ಪುಷ್ಪ-2’ ಸಿನಿಮಾ ರಿಲೀಸ್ ಆಗುತ್ತಿರುವುದು ಮತ್ತೊಂದು ಸ್ಪೆಷಲ್. ವಿದೇಶಗಳಲ್ಲಿ ಕೂಡ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಕಾಣುತ್ತಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗದ ಚಿತ್ರೀಕರಣ ದೊಡ್ಡ ಮಟ್ಟದಲ್ಲಿ ತಯಾರಾಗಿದೆ. ಬಜೆಟ್ ಹೆಚ್ಚಾದಷ್ಟೇ, ಸಿನಿಮಾ ಗಳಿಕೆಯೂ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಚಿತ್ರತಂಡಕ್ಕಿದೆ.
ಸಿನಿಮಾ ಟೀಮ್, 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ‘ಪುಷ್ಪ’-2 ಚಿತ್ರದ ಟ್ರೇಲರ್, ಸಾಂಗ್ಸ್ ಹೊರಬಂದು ಸದ್ದು ಮಾಡಾಗಿದೆ. ಇನ್ನೂ ಮಾಡುತ್ತಲೇ ಇದೆ. ಬೆಂಗಳೂರಿನಲ್ಲಿ ಕೆಲವೆಡೆ ಬೆಳಗ್ಗೆ 3.45ಕ್ಕೆ ಮೊದಲ ಪ್ರದರ್ಶನ ಶುರುವಾಗಲಿದೆ. ಆಂಧ್ರ, ತೆಲಂಗಾಣದಲ್ಲಿ ಬೆಳಗ್ಗೆ 5.30ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಟಿಕೆಟ್ ದರ ಹೆಚ್ಚಿಸಿರುವ ಬಗ್ಗೆ ಕೆಲವು ಕಡೆಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಆಂಧ್ರ, ತೆಲಂಗಾಣ ಸರ್ಕಾರಗಳು ಕೂಡ ಟಿಕೆಟ್ ದರ ಹೆಚ್ಚಿಸಲು ಅನುಮತಿ ನೀಡಿವೆ. ಆ ಸರ್ಕಾರಕ್ಕೆ ಸ್ವತಃ ಅಲ್ಲು ಅರ್ಜುನ್ ಅವರು ಥ್ಯಾಂಕ್ಸ್ ಕೂಡ ಹೇಳಿದ್ದಾರೆ. ಅಲ್ಲಿ ಸರ್ಕಾರ ನಿರ್ಮಾಪಕರ ಹಿತದೃಷ್ಟಿ ಇಟ್ಟುಕೊಂಡು ಟಿಕೆಟ್ ದರ ಹೆಚ್ಚಿಸೋಕೆ ಅನುಮತಿ ನೀಡಿದೆ. ಕರ್ನಾಟಕದಲ್ಲಿ ಟಿಕೆಟ್ ದರ ಹೆಚ್ಚಿಸಿದರೆ ಪ್ರತಿಭಟಿಸುವುದಾಗಿ ಸಿನಿಮಾ ಗಣ್ಯರು ಹೇಳಿಕೆ ನೀಡಿದ್ದಾರೆ. ಆದರೆ,ಸಿನಿಮಾ ನೋಡುವ ಉತ್ಸಾಹ ಇದೆಯಲ್ಲ, ಸಿನಿಪ್ರೇಮಿಗಳಿಗೆ ಟಿಕೆಟ್ ದರ ಲೆಕ್ಕಕ್ಕೆ ಬರೋದಿಲ್ಲ ಬಿಡಿ.
ಅದೇನೆ ಇರಲಿ, ಎಲ್ಲೆಡೆ ಪುಷ್ಪ 2 ಜ್ವರ ಶುರುವಾಗಿರೋದು ಸುಳ್ಳಲ್ಲ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಈ ಚಿತ್ರದ ಹಣೆಬರಹ ಡಿ.5ಕ್ಕೆ ಗೊತ್ತಾಗುತ್ತೆ. ಇಷ್ಟೊಂದು ಅಬ್ಬರ ಇರುವ ಸಿನಿಮಾದೊಳಗೆ ಕಂಟೆಂಟ್ ಸರಿಯಾಗಿದ್ದರೆ ಮಾತ್ರ ಹವಾ ಇನ್ನಷ್ಟು ಹೆಚ್ಚುತ್ತೆ.
ವಿಜಯ್ ಭರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಟಕ ಟಿವಿ