International News: ಸಿರಿಯಾದ ಅಧ್ಯಕ್ಷ ಬಸಾರ್ ಅಸ್ಸಾದ್ ಸರ್ಕಾರ ಉರುಳಿಸಿ ದೇಶ ತೊರೆಯುವಂತೆ ಒತ್ತಾಯಿಸಿದ್ದ ಸಿರಿಯನ್ ಬಂಡುಕೋರರು, ಮಹಿಳೆಯರು ಯಾವ ರೀತಿಯ ಉಡುಪು ಧರಿಸಬೇಕು ಎಂಬುದರ ಬಗ್ಗೆ ಘೋಷಣೆ ಮಾಡಿದ್ದಾರೆ. ಸಿರಿಯಾ ಅಧ್ಯಕ್ಷ ಬಸಾರ್ ಇದ್ದಾಗ, ಮಹಿಳೆಯರು ಮೈ ತುಂಬ ಉಡುಗೆಗಳನ್ನು ಧರಿಸಲೇಬೇಕಿತ್ತು. ಆದರೆ ಇದೀಗ ಬಂದಿರುವ ಬಂಡುಕೋರರು, ಮಹಿಳೆಯರು ಮೈತುಂಬ ಬಟ್ಟೆ ಹಾಕಿಕೊಳ್ಳಲೇಬೇಕು ಎಂದೇನಿಲ್ಲ. ಅವರು ತಮ್ಮ ಮನಸ್ಸಿಗೆ ಬಂದ ಬಟ್ಟೆಯನ್ನು ಧರಿಸಬಹುದು ಎಂದು ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಂಡುಕೋರರು, ಮಹಿಳೆಯರಿಗೆ ಧಾರ್ಮಿಕ ಉಡುಪು ಧರಿಸಲೇಬೇಕು ಎಂಬ ಹೇರಿಕೆ ಇರುವುದಿಲ್ಲ. ಉಡುಪು ಧರಿಸಲು ಎಲ್ಲಾ ಹೆಣ್ಣು ಮಕ್ಕಳಿಗೂ ವೈಯಕ್ತಿಕ ಸ್ವಾತಂತ್ರ್ಯ ನೀಡಲಾಗಿದೆ. ಈ ರೀತಿ ವೈಯಕ್ತಿಕ ಸ್ವಾತಂತ್ರ ನೀಡಿದಾಗ ಮಾತ್ರ, ಒಂದು ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯವೆಂದು ಬಂಡುಕೋರರು ಅಭಿಪ್ರಾಯ ಪಟ್ಟಿದ್ದಾರೆ.
50 ವರ್ಷಗಳ ಕಾಲ ಬಸಾರ್ ಅಸ್ಸಾದ್ ಕುಟುಂಬವೇ ಸಿರಿಯಾವನ್ನು ಆಳ್ವಿಕೆ ಮಾಡುತ್ತಿತ್ತು. ಇದರಿಂದ ರೋಸಿಹೋಗಿದ್ದ ಜನ ಬಂಡೆದ್ದು, ಅಲ್ಲಿನ ಸೈನಿಕರೊಂದಿಗೆ ಹಲವು ದಿನಗಳ ಕಾಲ ಹೋರಾಡಿ, ಕೊನೆಗೂ ಅಸ್ಸಾದ್‌ನನ್ನು ದೇಶ ಬಿಟ್ಟು ಹೋಗುವಂತೆ ಮಾಡಿದೆ. ಅಸಾದ್ ರಷ್ಯಾಕ್ಕೆ ಹೋಗಿ, ಅಲ್ಲಿ ಅಡಗಿ ಕುಳಿತಿದ್ದಾನೆಂಬ ಮಾಹಿತಿ ಇದೆ.