ಅಣ್ವಸ್ತ್ರ ಪ್ರಯೋಗಿಸ್ತೀವಿ ಅಂದವನ ಟ್ವಿಟ್ಟರ್‌ ಬ್ಲಾಕ್‌ : ವಿಶ್ವಸಂಸ್ಥೆಯಲ್ಲಿ ಬೆತ್ತಲಾಯ್ತು ಉಗ್ರ ರಾಷ್ಟ್ರ ಪಾಕಿಸ್ತಾನ..

ನವದೆಹಲಿ : ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಪಾಪಿಗಳ ರಾಷ್ಟ್ರಕ್ಕೆ ಭಾರತ ಒಂದಿಲ್ಲೊಂದು ರೀತಿಯಲ್ಲಿ ಆಘಾತ ನೀಡುತ್ತಿದೆ. ಉಗ್ರರ ದಾಳಿಯಲ್ಲಿ ಬಲಿಯಾದ ಅಮಾಯಕ ಪ್ರವಾಸಿಗರ ಕುಟುಂಬಗಳಿಗೆ ನ್ಯಾಯ ಸಿಗಬೇಕೆಂದು ಒತ್ತಾಯಗಳು ಹೆಚ್ಚಾಗಿವೆ.

ಅಲ್ಲದೆ ಭಾರತದಲ್ಲಿ ಪಾಕಿಸ್ತಾನದ ವಿರುದ್ಧದ ಪ್ರತೀಕಾರದ ಕೂಗು ಸಹ ಅಷ್ಟೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಸರ್ಕಾರ ಹಂತ ಹಂತವಾಗಿ ಪಾಕಿಗಳ ಮಗ್ಗಲು ಮುರಿಯುವ ಕೆಲಸ ಮಾಡುತ್ತಿದೆ. ಘಟನೆಯ ಬಳಿಕ ತುರ್ತು ಸಭೆ ನಡೆಸಿದ್ದ ಭಾರತ ಸರ್ಕಾರ ಪಾಕಿಸ್ತಾನದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿತಗೊಳಿಸಿದೆ.

ಅಣ್ವಸ್ತ್ರ ಪ್ರಯೋಗಿಸ್ತೀವಿ ಎಂದವನ ಟ್ವಟ್ಟರ್‌ ಬ್ಲಾಕ್..!

ಪ್ರಮುಖವಾಗಿ ಸಿಂಧೂ ನದಿ ಒಪ್ಪಂದವನ್ನು ಅಮಾನತುಗೊಳಿಸಿ ಅನಾಗರಿಕ ರಾಷ್ಟ್ರಕ್ಕೆ ದೊಡ್ಡ ಏಟು ನೀಡಿದೆ. ಇದಾದ ಬಳಿಕ ಕಂಗಾಲಾದ ಪಾಕಿಸ್ತಾನಿ ನಾಯಕರು ಭಾರತದ ಬೊಗಳೆ ಬಿಡುತ್ತಿದ್ದಾರೆ. ಹೀಗೆಯೇ ಭಾರತದ ವಿರುದ್ಧ ಮಾತನಾಡಲು ತಮ್ಮ ಬಂಡವಾಳವನ್ನೇ ಬಯಲಿಗೆ ತಂದಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್‌ಗೆ ಇದೀಗ ಭಾರತ ಮತ್ತೊಂದು ಮರ್ಮಾಘಾತ ನೀಡಿದೆ.

ಕಾಲ ಸನ್ನಿಹಿತವಾಗಿದೆ. ಹೀಗಾಗಿ ನಮ್ಮ ಸೇನೆಯನ್ನು ಬಲಪಡಿಸುತ್ತಿದ್ದೇವೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಮುಖ ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವೆಲ್ಲವನ್ನೂ ಈಗಾಗಲೇ ನಿರ್ಧರಿಸಲಾಗಿದೆ. ವಾಕ್ಸಮರಗಳು ಅಧಿಕವಾಗಿವೆ. ಭಾರತದ ದಾಳಿಯ ಸಾಧ್ಯತೆ ಕುರಿತು ಸರ್ಕಾರಕ್ಕೆ ಸೇನೆ ಮಾಹಿತಿ ನೀಡಿದೆ. ನಮ್ಮ ಅಸ್ತಿತ್ವಕ್ಕೆ ನೇರ ಅಪಾಯ ಎದುರಾದರೆ ಮಾತ್ರ ಅಣ್ವಸ್ತ್ರ ಉಪಯೋಗಿಸಲಾಗುವುದು ಎಂದಿದ್ದ ಖ್ವಾಜಾ ಟ್ವಿಟ್ಟರ್‌ (ಎಕ್ಸ್) ಖಾತೆಯನ್ನು ಭಾರತದಲ್ಲಿ ಕೇಂದ್ರ ಸರ್ಕಾರ ಬ್ಲಾಕ್‌ ಮಾಡಿಬಿಟ್ಟಿದೆ. ಈ ಮೂಲಕ ಯುದ್ಧೋನ್ಮಾದದಲ್ಲಿದ್ದ ಪಾಕಿಸ್ತಾನದ ರಕ್ಷಣಾ ಸಚಿವನಿಗೆ ಭಾರತ ಶಾಕ್‌ ನೀಡಿದೆ. ಅಲ್ಲದೆ ನಾವು ಭಾರತ ವಿರೋಧಿ ನೀಚ ಮನಸ್ಥಿತಿಗಳನ್ನು ಒಪ್ಪುವುದಿಲ್ಲ ಎಂಬ ಕಠಿಣ ಸಂದೇಶವನ್ನೂ ಭಾರತ ರವಾನಿಸಿದೆ.

ಪಾಕ್‌ ಮುಖವಾಡ ಕಳಚಿಸ ಭಾರತ..!

ಕಳೆದ ಏಪ್ರಿಲ್‌ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತಾನೇ ಪ್ರಾಯೋಜಿಸಿರುವುದಾಗಿ ಪಾಕಿಸ್ತಾನ ಬಹಿರಂಗವಾಗಿ ಒಪ್ಪಿಕೊಂಡಿದೆ. ಇದೇ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಖುದ್ದಾಗಿ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಹಾಗೂ ಅವರಿಗೆ ಆರ್ಥಿಕ ನೆರವನ್ನು ನೀಡುತ್ತಿರುವುದಾಗಿ ಹೇಳಿದ್ದಾರೆ.ಇದರಿಂದಲೇ ಗೊತ್ತಾಗುತ್ತದೆ, ಪಾಕಿಸ್ತಾನವು ಉಗ್ರರನ್ನು ಬೆಳೆಸುತ್ತದೆ ಹಾಗೂ ಜಾಗತಿಕ ಮಟ್ಟದಲ್ಲಿ ಅಸ್ಥಿರತೆಗೆ ಕಾರಣವಾಗುತ್ತಿದೆ ಎಂದು ವಿಶ್ವಸಂಸ್ಥೆಯ ಭಾರತದ ಉಪ ಖಾಯಂ ರಾಯಭಾರಿ ಯೋಜ್ನಾ ಪಟೇಲ್‌ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನಾ ನಿಗ್ರಹ ಕಚೇರಿಯಲ್ಲಿ ಭಯೋತ್ಪಾದನಾ ಸಂತ್ರಸ್ತರ ಸಂಘ ವೋಟನ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ, ಪಹಲ್ಗಾಮ್‌ ಉಗ್ರರ ದಾಳಿಯ ಕುರಿತು ಪಾಕಿಸ್ತಾನದ ಪ್ರಸ್ತಾಪಕ್ಕೆ ಮಾತನಾಡಿದ ಅವರು, ಖ್ವಾಜಾ ತಪ್ಪೊಪ್ಪಿಗೆಯಿಂದ ಯಾರಿಗೂ ಆಶ್ಚರ್ಯವಾಗಿಲ್ಲ, ಯಾಕೆಂದರೆ ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯನ್ನು ಬೆಳೆಸುವ ರಕ್ಕಸ ರಾಷ್ಟ್ರವಾಗಿದೆ. 2008 ರ ಮುಂಬೈ ದಾಳಿಯ ನಂತರ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಅತಿ ಹೆಚ್ಚು ಸಾವುಗಳಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಬಲಕ್ಕೆ ನಿಂತ ವಿಶ್ವ ನಾಯಕರಿಗೆ ಥ್ಯಾಂಕ್ಸ್..!

ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಗೆ ಸಂತ್ರಸ್ತವಾಗಿರುವ ಭಾರತದ ಮೇಲೆ ಇಂತಹ ದಾಳಿಗಳಿಂದ ಬೀರುವ ಪರಿಣಾಮವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಪಹಲ್ಗಾಮ್ ದಾಳಿಯ ನಂತರ ಜಾಗತಿಕ ಮಟ್ಟದ ದೇಶಗಳು ಮತ್ತು ವಿಶ್ವದ ನಾಯಕರಿಂದ ದೊರೆತ ಬೆಂಬಲಕ್ಕೆ ಭಾರತವು ತೆರೆದ ಹೃದಯದಿಂದ ಅಭಿನಂದಿಸುವುದರ ಜೊತೆಗೆ ಧನ್ಯವಾದಗಳನ್ನು ತಿಳಿಸುತ್ತದೆ ಎಂದು ಹೇಳಿದ್ದಾರೆ.

ಇಂತಹ ಒಂದು ವೇದಿಕೆಯನ್ನು ದುರುಪಯೋಗ ಪಡಿಸಿಕೊಂಡು ಒಂದು ದೇಶದ ವಿರುದ್ಧ ದುರ್ಬಲ ಪ್ರಚಾರ ಮಾಡುತ್ತಿರುವುದು ವಿಷಾದನೀಯ ಎಂದು ಪಟೇಲ್‌ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಾಗತಿಕ ಭಯೋತ್ಪಾದನೆಯನ್ನು ಉತ್ತೇಜಿಸುವ ಮತ್ತು ಆ ಸ್ಥಳವನ್ನು ಅಸ್ಥಿರಗೊಳಿಸುವ ಪ್ರಯತ್ನ ಇದಾಗಿದೆ. ಜಗತ್ತು ಇನ್ನು ಮುಂದೆ ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇದಕ್ಕಿಂತ ಹೆಚ್ಚಿನದಾಗಿ ನಾನು ಏನನ್ನು ಹೇಳಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಯೋಜ್ನಾ ಪಟೇಲ್ ಪಾಕ್‌ನ ಬೆಂಡೆತ್ತಿದ್ದಾರೆ. ಈ ಮೂಲಕ ಎಲ್ಲವನ್ನೂ ಮಾಡಿ ನಾನವನಲ್ಲ ಎಂದು ಮೆರೆಯುತ್ತಿರುವ ಪಾಕಿಗಳ ಅಸಲಿ ಮುಖವಾಡವನ್ನು ಭಾರತವು ಜಗತ್ತಿನ ಎದುರು ಕಳಚಿದೆ.

ಖ್ವಾಜಾ ಹೇಳಿದ್ದೇನು..?

ಇನ್ನೂ ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಪಾಕಿಸ್ತಾನ ಭಯೋತ್ಪಾದನೆಯನ್ನು ಮೂರು ದಶಕಗಳಿಂದ ಬೆಂಬಲಿಸುತ್ತ ಬರುತ್ತಿದೆ. ಅಲ್ಲದೆ ಆ ಉಗ್ರರಿಗೆ ತರಬೇತಿ, ಹಣಕಾಸಿನ ನೆರವನ್ನು ನೀಡುತ್ತಿದೆ. ಇದರಿಂದಲೇ ನಾವು ಈ ಸಂಕಟಗಳನ್ನು ಅನುಭವಿಸುತ್ತಿದ್ದೇವೆ, ಪಾಶ್ಚಿಮಾತ್ಯ ದೇಶಗಳಿಗಾಗಿ ನಾವು ಈ ಕೊಳಕು ಕೆಲಸ ಮಾಡುತ್ತಿದ್ದೇವೆ ಎಂದು ಆಸಿಫ್‌ ಬಹಿರಂಗವಾಗಿ ಒಪ್ಪಿಕೊಂಡು ಅಮೆರಿಕ ಹಾಗೂ ಬ್ರಿಟನ್‌ನಂತಹ ದೇಶಗಳಿಗಾಗಿ ನಾವು ಇದನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದನು. ಭಾರತ ನಮ್ಮ ಮೇಲೆ ಯುದ್ಧಕ್ಕೆ ಸಿದ್ಧವಾದರೆ ಪಾಕಿಸ್ತಾನವು ತಕ್ಕ ಉತ್ತರ ನೀಡಲಿದೆ ಎಂದು ಭಂಡತನದ ಹೇಳಿಕೆ ನೀಡಿದ್ದನು. ಆದರೆ ಈ ಎಲ್ಲ ವಿಚಾರಗಳ ಕುರಿತು ಭಾರತವು ವಿಶ್ವಸಂಸ್ಥೆಯಲ್ಲಿ ತನ್ನ ಧ್ವನಿ ಎತ್ತುವ ಮೂಲಕ ಪಾಕಿಗಳ ರಾಕ್ಷಸಿತನವನ್ನು ಬಟಾ ಬಯಲು ಮಾಡಿದೆ.

About The Author