Saturday, May 3, 2025

Latest Posts

Health Tips: ಬೇಸಿಗೆಯಲ್ಲಿ ಹೆಚ್ಚುತ್ತಿವೆ ಚಿಕನ್‌ ಪಾಕ್ಸ್ ಪ್ರಕರಣಗಳು

- Advertisement -

Health Tips: ಬೇಸಿಗೆ ಕಾಲ ಬಂತಂದ್ರೆ ಸಾಕು ಎಲ್ಲಾ ವಯಸ್ಸಿನವರಲ್ಲೂ ಹಲವಾರು ಚರ್ಮದ ಸಮಸ್ಯೆಗಳು ಕಂಡುಬರುತ್ತವೆ. ಅದಕ್ಕೆ ವಾತಾವರಣ, ಆಹಾರ ಸೇರಿದಂತೆ ವಿವಿಧ ಕಾರಣಗಳೂ ಇರಬಹುದು. ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಚಿಕನ್‌ಪಾಕ್ಸ್‌ ಸಮಸ್ಯೆ ಕಾಣಿಸಿಕೊಂಡಿದುದು ವರದಿಯಾಗಿತ್ತು. ಚಿಕನ್‌ಪಾಕ್ಸ್‌ ಅನ್ನು ಸಿಡುಬು ಅಥವಾ ಅಮ್ಮಾ ಎಂದೂ ಕರೆಯಲಾಗುತ್ತದೆ. ಮಕ್ಕಳು ಬೇಸಿಗೆ ಸಂದರ್ಭ ರಜೆಯಿರುವ ಹಿನ್ನೆಲೆ ಇತರ ಮಕ್ಕಳೊಂದಿಗೆ ಸೇರಿ ಆಟಗಳಲ್ಲಿ ತೊಡಗಿಕೊಳ್ಳುತ್ತಾರೆ. ಸಾಂಕ್ರಾಮಿಕ ಸಮಸ್ಯೆಯಾದ ಚಿಕನ್‌ಪಾಕ್ಸ್‌ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ. ಮೇ ಮತ್ತು ಜೂನ್‌ ತಿಂಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆ. ಅನೇಕರಲ್ಲಿ ಅಮ್ಮಾ/ಚಿಕನ್‌ಪಾಕ್ಸ್‌ ಚರ್ಮದ ಸಮಸ್ಯೆಯು ಬಾಲ್ಯದಲ್ಲಿ ಕಾಣಿಸಿಕೊಂಡಿರುತ್ತದೆ. ಇದಕ್ಕೆ ಚುಚ್ಚುಮದ್ದು ಕೂಡ ಇದೆ. ಲಸಿಕೆಯಿಂದ ಚಿಕನ್‌ಪಾಕ್ಸ್‌ ಹರಡುವಿಕೆ ಕಡಿಮೆಯಾಗಿದ್ದರೂ ಸಹ ಲಸಿಕೆ ಹಾಕಿಸಿಕೊಂಡ ಮಕ್ಕಳಲ್ಲೂ ಕೂಡ ಚಿಕನ್‌ಪಾಕ್ಸ್‌ ಕಾಣಿಸಿಕೊಳ್ಳುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿವೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ. ಅಭಿರಾಮ್‌ ರಾಯಪತಿ.

ವರಿಸೆಲ್ಲಾ-ಜೋಸ್ಟರ್ ವೈರಸ್‌ನಿಂದ ಉಂಟಾಗುವ ಚಿಕನ್‌ಪಾಕ್ಸ್ ಹೆಚ್ಚು ಸಾಂಕ್ರಾಮಿಕ ಮತ್ತು ಬಹಳ ಹಿಂದಿನಿಂದಲೂ ಇರುವ ವೈರಲ್ ಸೋಂಕು. ವಿಜ್ಞಾನಕ್ಕೆ ತಿಳಿದಿರುವ ಅತ್ಯಂತ ಪ್ರಾಚೀನ ವೈರಸ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಚಿಕನ್‌ಪಾಕ್ಸ್ ಸಾಮಾನ್ಯವಾಗಿ ಜ್ವರ, ಸುಸ್ತು ಮುಂತಾದ ಲಕ್ಷಣಗಳೊಂದಿಗೆ ಪ್ರಾರಂಭವಾಗಿ ನಂತರ ಗುಳ್ಳೆಗಳ ದದ್ದುಗಳಾಗಿ ಮುಖ ಹಾಗೂ ದೇಹದ ಇತರ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೋವಿಡ್‌ ನಂತರದ ದಿನಗಳನ್ನು ಗಮನಿಸಿದಾಗ ಈ ಹಿಂದೆ ಲಸಿಕೆ ಹಾಕಿದವರಲ್ಲೂ ಕೂಡ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೊಂದು ಅಸಾಮಾನ್ಯವಾದ ಪ್ರಕರಣ. ಚಿಕನ್‌ಪಾಕ್ಸ್ ಹೆಚ್ಚಾಗಿ ತನ್ನಷ್ಟಕ್ಕೆ ತಾನೇ ಗುಣವಾಗುವ ಕಾಯಿಲೆಯಾಗಿದ್ದರೂ, ಶೇ 5 ಕ್ಕಿಂತ ಕಡಿಮೆ ರೋಗಿಗಳಲ್ಲಿ ಸಮಸ್ಯೆಯಾಗಿ ಪರಿಣಮಿಸಬಹುದು ಎಂದು ತಜ್ಞರು ಹೇಳುತ್ತಾರೆ.

ಚಿಕನ್‌ಪಾಕ್ಸ್ ಕಾಣಿಸಿಕೊಂಡ ಮಕ್ಕಳಲ್ಲಿ ಗಾಯದ ಕಲೆಗಳು ಉಳಿಯಬಹುದು. ಅನೇಕರಿಗೆ ಯಾವುದೇ ರೀತಿಯ ದೊಡ್ಡ ತೊಂದರೆಗಳಾಗದಿದ್ದರೂ, ರೋಗನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಅಂಗಾಂಗ ಸೋಂಕುಗಳು ಸೇರಿದಂತೆ ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ತಜ್ಞ ಅಭಿರಾಮ್‌ ತಿಳಿಸಿದ್ದಾರೆ.

ಚಿಕನ್‌ಪಾಕ್ಸ್‌ ಸಮಸ್ಯೆಗೆ ಜನರು ಇನ್ನೂ ಬೇವಿನ ಎಲೆಗಳು ಅಥವಾ ಇತರ ವಸ್ತುಗಳನ್ನು ಬಳಸುವ ಮೂಲಕ ಹಿಂದಿನ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಆದ್ರೆ ಈ ಸಮಸ್ಯೆಗೆ ಕನಿಷ್ಟ 5 ರಿಂದ 10 ದಿನಗಳ ಕಾಲ ರೋಗನಿರೋಧಕ ಔಷಧಿಗಳು ಮತ್ತು ಕಟ್ಟುನಿಟ್ಟಾದ ಆಹಾರ ಸೇವನೆಯ ಅವಶ್ಯವಿರುತ್ತದೆ. ಬೇವಿನ ಎಲೆಗಳ ಬಳಕೆಯ ಮೂಲಕ ಚಿಕನ್‌ಪಾಕ್ಸ್ ಅನ್ನು ನಿವಾರಿಸಬಹುದು ಎಂದು ಯಾವುದೇ ವೈದ್ಯಕೀಯ ಪುರಾವೆಗಳು ಹೇಳಿಲ್ಲ. ಆದ್ರೆ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ದೇಹಕ್ಕೆ ಯಾವುದೇ ವೈರಲ್ ಸೋಂಕು ತಗುಲಿದರೆ ದೇಹಕ್ಕೆ ಅಗತ್ಯ ನೀರಿನ ಸೇವನೆ ಮುಖ್ಯವಾಗಿರುತ್ತದೆ ಹಾಗಾಗಿ ಚಿಕನ್‌ಪಾಕ್ಸ್‌ನಿಂದ ಬಳಲುತ್ತಿರುವವರು ನಿಯಮಿತವಾಗಿ ನೀರನ್ನು ಕುಡಿಯಬೇಕು ಎಂದು ವಾಸವಿ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ. ಅಭಿರಾಮ್‌ ರಾಯಪತಿ ಸಲಹೆ ನೀಡಿದ್ದಾರೆ.

- Advertisement -

Latest Posts

Don't Miss