ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಎರಡು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದ ಜನರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಗ್ಯಾರಂಟಿ ಯೋಜನೆಗಳ ಹೊರಾತಾಗಿಯೂ ಸಿದ್ದರಾಮಯ್ಯ ನೇತೃತ್ಚದ ಕಾಂಗ್ರೆಸ್ ಸರ್ಕಾರವು ಇನ್ನಷ್ಟು ಜನರಿಗೆ ಹತ್ತಿರವಾಗಲು ಸಿದ್ಧತೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ 20ರಂದು ವಿಜಯನಗರದಲ್ಲಿ ನಡೆಯುವ ಸಮಾವೇಶದಲ್ಲಿ ತಾಂಡಾ, ಹಟ್ಟಿ ಸೇರಿದಂತೆ ಕಂದಾಯ ಭೂಮಿಯಲ್ಲಿ ವಾಸವಿರುವ 1 ಲಕ್ಷ ಜನರಿಗೆ ಪಟ್ಟಾ ಖಾತೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ದಳ, ಬಿಜೆಪಿಯವರು ನೀಡಿದ್ದಾರೆಯೇ..?
ರಾಮನಗರದಲ್ಲಿ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಯುವಕರಿಗೆ ಯುವನಿಧಿ ಮೂಲಕ ನೆರವಿಗೆ ನಿಂತಿದೆ. ಮಹಿಳೆಯರ ಪರವಾಗಿ ಐತಿಹಾಸಿಕ ಯೋಜನೆಗಳನ್ನು ತಂದು ಇತಿಹಾಸ ನಿರ್ಮಾಣ ಮಾಡಿದೆ. ಉಚಿತ ಬಸ್, ಗೃಹಲಕ್ಷ್ಮಿ ಸೇರಿದಂತೆ ಅನೇಕ ಯೋಜನೆಗಳನ್ನು ದಳ, ಬಿಜೆಪಿಯವರು ನೀಡಿದ್ದಾರೆಯೇ..? ಆದರೆ ಅದಕ್ಕೆ ಕಾರಣವಾಗಿರುವುದು ಕಾಂಗ್ರೆಸ್ ಪಕ್ಷ ಎಂದು ಜೆಡಿಎಸ್, ಬಿಜೆಪಿಯನ್ನು ಟೀಕಿಸಿದ್ದಾರೆ.
ರಾಜ್ಯಾದ್ಯಂತ 100 ಕಾಂಗ್ರೆಸ್ ಪಕ್ಷದ ಕಚೇರಿಗಳ ನಿರ್ಮಾಣ..
ಇನ್ನೂ ರಾಜ್ಯಾದ್ಯಂತ 100 ಕಾಂಗ್ರೆಸ್ ಪಕ್ಷದ ಕಚೇರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿಯೇ ಇಲ್ಲಿಯೂ ನೆರವೇರಿಸಲಾಗುತ್ತದೆ. ಚನ್ನಪಟ್ಟಣ ತಾಲೂಕಿನ ಅಧ್ಯಕ್ಷರು ಸೇರಿದಂತೆ ಎಲ್ಲರಿಂದಲೂ 50 ಲಕ್ಷ ರೂಪಾಯಿ ದೇಣಿಗೆ ಸಂಗ್ರಹ ಮಾಡಲಾಗುವುದು. ಕನಕಪುರದಲ್ಲಿ ಇರುವ ಜಾಗವನ್ನು ಹರಾಜಿನಲ್ಲಿ ಮಾರಾಟ ಮಾಡಿ ಆ ಹಣವನ್ನೂ ಸಹ ರಾಮನಗರ ಕಚೇರಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ರೇವಣ್ಣ, ಯೋಗೇಶ್ವರ್ ಬಡವರು ಅವರಿಂದ ಏನು ಬೇಡ..!
ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮಾಜಿ ಸಚಿವ ಎಚ್.ಎಂ. ರೇವಣ್ಣ ರಾಜ್ಯದಲ್ಲಿ 100 ಕಾಂಗ್ರೆಸ್ ಪಕ್ಷದ ಕಚೇರಿ ಆಗುತ್ತಿರುವುದಕ್ಕೆ ಅದಕ್ಕೆ ಪ್ರೇರಣೆ ಎಂದರೆ ಅದು ಡಿಕೆ ಶಿವಕುಮಾರ್. ನಾನು ವೈಯಕ್ತಿಕವಾಗಿ ಒಂದು ಲಕ್ಷದ ಒಂದು ರೂಪಾಯಿ ಕೊಡುವುದಾಗಿ ಘೋಷಿಸಿದರು. ಆಗ ಮಧ್ಯ ಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನೋಡ್ರಪ್ಪಾ ನಮ್ಮ ಎಚ್.ಎಂ.ರೇವಣ್ಣ ಬಡವ, ಅವನ ಪರವಾಗಿ ನಾನೇ 10 ಲಕ್ಷ ರೂಪಾಯಿ ಕೊಡುತ್ತೇನೆ. ಯೋಗೇಶ್ವರ್ ಕೂಡಾ ಬಡವ, ಅವನು ಒಂದು ರೂಪಾಯಿ ಕೊಡುವುದು ಬೇಡ. ಅವನ ಪರವಾಗಿ ನಾನೇ 25 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಕಚೇರಿಗೆ ಸ್ವಂತ ಜಾಗವನ್ನು ನೀಡುವುದಾಗಿ ಅವರು ಘೋಷಿಸಿದ್ದಾರೆ.
ನಿಮ್ಮನ್ನು ನಾಯಕರನ್ನಾಗಿ ರೂಪಿಸುವುದು ನನ್ನ ಗುರಿ..
ಕಾಂಗ್ರೆಸ್ ಪಕ್ಷ ಮಹಿಳೆಯರ ಮೊಗದಲ್ಲಿ ನಗು ತರಿಸಿದೆ, ಯುವ ಸಮೂಹಕ್ಕೆ ಅನುಕೂಲ ಮಾಡಿದೆ, ಅಲ್ಲದೆ ರಾಜ್ಯದ ಅಭಿವೃದ್ದಿಗೆ ಶ್ರಮಿಸುತ್ತಿದೆ. ಇನ್ನೂ ಈ ಯುವ ಕಾಂಗ್ರೆಸ್ ನಾಯಕತ್ವ ಬೆಳೆಸುವ ಪ್ರಯೋಗ ಶಾಲೆಯಂತಿದೆ. ನೀವು ನಾಯಕರಾಗಿ ಬೆಳೆಯಬೇಕಾದರೆ ಮೊದಲು ತಳಮಟ್ಟದಿಂದ ದುಡಿಯಬೇಕು, ಪಕ್ಷದ ಕೆಲಸ ಮಾಡಬೇಕು. ನಾವು ನೀಡಿದ ಜವಾಬ್ದಾರಿಯನ್ನು ನಿಭಾಯಿಸಬೇಕು. ಯುವಕರಿಗೆ ನಿಮ್ಮ ಶಕ್ತಿಯ ಅರಿವಿಲ್ಲ. ಯಾರೋ ಮಾಡುವ ಟೀಕೆಗಳಿಗೆ ಹೆದರಬಾರದು ಎಂದು ಕಿವಿ ಮಾತು ಹೇಳಿದ್ದಾರೆ. ಅಲ್ಲದೆ ನಿಮ್ಮ ಏರಿಯಾ, ಬೂತ್ ಮಟ್ಟದಲ್ಲಿ ನೀವು ಪ್ರಬಲವಾಗಿ ಬೆಳೆಯಬೇಕು. ನಿಮ್ಮ ಯಾವುದೇ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಆ ಕಾರ್ಯಗಳು ಜನರ ಮನಸ್ಸನ್ನು ಗೆಲ್ಲುವಂತಾಗಬೇಕು. ನಿಮ್ಮನ್ನು ನಾಯಕರನ್ನಾಗಿ ರೂಪಿಸಬೇಕು ಎನ್ನುವುದು ನನ್ನ ಗುರಿ ಎಂದು ಶಿವಕುಮಾರ್ ತಿಳಿಸಿದ್ದಾರೆ.