ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ಭಾರತವು 100ಕ್ಕೂ ಅಧಿಕ ರಕ್ತ ಪಿಪಾಸುಗಳನ್ನು ಬಲಿ ಪಡೆದಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತ್ತು. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆದ ಈ ಬೃಹತ್ ಕಾರ್ಯಾಚರಣೆಯು ಪಾಕಿಗಳ ಬುಡವನ್ನೇ ಅಲ್ಲಾಡಿಸಿ ಬಿಟ್ಟಿತ್ತು, ಅಲ್ಲದೆ ಉಗ್ರರಿಗೆ ತರಬೇತಿ ನೀಡುತ್ತಿದ್ದ ಹಲವು ಪ್ರಮುಖ ಕೇಂದ್ರಗಳನ್ನು ಧ್ವಂಸ ಮಾಡಿತ್ತು. ಇನ್ನೂ ಪಹಲ್ಗಾಮ್ ದಾಳಿ ನಡೆದ ಬಳಿಕ ಎರಡು ವಾರಗಳ ಕಾಲ ಮಾಡಿದ್ದ ಸಿದ್ಧತೆಯ ವೇಳೆ ಭಾರತವು ಮುಂಚಿತವಾಗಿಯೇ ಅಮೆರಿಕಕ್ಕೆ ತಿಳಿಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಒಳನುಗ್ಗಿ ಹೆಡೆಮುರಿ ಕಟ್ಟುತ್ತೇವೆ..
ನಾವು ಒಳನುಗ್ಗಿ ಪಾಕಿಗಳಲ್ಲಿರುವ ಭಯೋತ್ಪಾದಕರ ಹೆಡೆಮುರಿ ಕಟ್ಟುತ್ತೇವೆ, ಯಾವುದೇ ಕಾರಣಕ್ಕೂ ಉಗ್ರವಾದವನ್ನು ಸಹಿಸುವುದಿಲ್ಲ ಎಂದು ಭಾರತೀಯ ವಿದೇಶಾಂಗ ಇಲಾಖೆ ಸಚಿವ ಎಸ್.ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ತಿಳಿಸಿದ್ದರು. ದೂರವಾಣಿಯಲ್ಲಿ ಮಾತನಾಡಿದ್ದ ಜೈಶಂಕರ್, ನಾವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಮೇಲೆ ದಾಳಿ ಮಾಡುತ್ತೇವೆ. ಅದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಖಡಕ್ ಹೇಳಿದ್ದರು. ಪಹಲ್ಗಾಮ್ ಘಟನೆ ನಡೆದು ಒಂದು ವಾರದ ಬಳಿಕ ರೂಬಿಯೊ ಅವರೊಂದಿಗೆ ಮಾತನಾಡಿದ್ದ ಜೈಶಂಕರ್ ಭಯೋತ್ಪಾದನೆಯ ಕುರಿತು ಭಾರತಕ್ಕಿರುವ ಸ್ಪಷ್ಟ ನಿಲುವನ್ನು ಹೊರಹಾಕಿದ್ದರು.
ಅಂದುಕೊಂಡ ಗುರಿ ತಲುಪಿದ ಭಾರತ..
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಮೇ 1 ರಂದು ದೂರವಾಣಿ ಕರೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಮೇಲೆ ಭಾರತ ದಾಳಿ ಮಾಡಲಿದೆ ಎಂದು ಹೇಳಿದ್ದರು. ಅದರಂತೆ ಭಾರತದ ಗುರಿಯು ಅಂದುಕೊಂಡಂತೆ ಸಕ್ಸಸ್ ಆಗಿದೆ, ಉಗ್ರರನ್ನು ಹೊಡೆದುರುಳಿಸಿ ಜಾಗತಿಕ ಮಟ್ಟದಲ್ಲಿ ತನ್ನ ಶಕ್ತಿಯನ್ನು ಮತ್ತೊಮ್ಮೆ ಭಾರತ ತೋರಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಬಲಿಷ್ಠ ದೇಶಗಳು ಭಾರತದ ಬೆಂಬಲಕ್ಕೆ ಭಯೋತ್ಪಾದಕತೆಯ ವಿರುದ್ಧ ಹೋರಾಡಲು ಜೊತೆಯಾಗುತ್ತಿವೆ. ಇದರಿಂದ ರಣಹೇಡಿ, ಉಗ್ರ ಪೋಷಕ ಪುಕ್ಕಲು ಪಾಕಿಸ್ತಾನಕ್ಕೆ ಇನ್ನಷ್ಟು ಭಯ ಶುರುವಾಗಿದೆ.
ಭಾರತ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ..
ಇನ್ನೂ ಭಾರತದ ರಾಜಕೀಯ, ಸಾಮಾಜಿಕ ಮತ್ತು ಮಿಲಿಟರಿ ಶಕ್ತಿಯ ಬಲವೇ ಆಪರೇಷನ್ ಸಿಂಧೂರ. ಇಂದು ಭಾರತ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ. ನಾವು ನಿರಂತರವಾಗಿ ನಮ್ಮ ಶಕ್ತಿಯನ್ನ ಹೆಚ್ಚಿಸಿಕೊಳ್ಳುತ್ತಿದ್ದೇವೆ. ನಮ್ಮ ಸಶಸ್ತ್ರ ಪಡೆಗಳು ಭಾರತದ ಮೇಲೆ ದಾಳಿ ನಡೆಸಿ ಅನೇಕ ಕುಟುಂಬಗಳನ್ನು ಬಲಿಪಡೆದ ಭಯೋತ್ಪಾದಕ ಸಂಘಟನೆಗಳನ್ನು ಹೊಡೆದುರುಳಿಸಿವೆ. ಈ ಮೂಲಕ ಆಪರೇಷನ್ ಸಿಂಧೂರಕ್ಕೆ ನ್ಯಾಯ ಒದಗಿಸಿಕೊಟ್ಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಉಗ್ರರ ವಿರುದ್ಧ ನಮ್ಮ ನಿಲುವು ಗಟ್ಟಿಯಾಗಿದೆ..
ನಮ್ಮ ಭಾರತದ ಮೂರು ಪಡೆಗಳ ಶೌರ್ಯವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಈ ಕಾರ್ಯಾಚರಣೆಯು ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ಸಂಕಲ್ಪವಾಗಿದೆ,ಉಗ್ರವಾದವನ್ನು ಬುಡ ಸಮೇತ ಕಿತ್ತು ಹಾಕುವುದು ನಮ್ಮ ಗುರಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ನಾವು ಯಾವುದೇ ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಆದರೆ ಪಾಕಿಸ್ತಾನ ಭಾರತದ ಕೆಲವು ಪ್ರದೇಶಗಳನ್ನು ಟಾರ್ಗೆಟ್ ಮಾಡಿ, ದೇವಾಲಯ, ಗುರುದ್ವಾರಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಪಡೆಗಳು ಪಾಕ್‌ನ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿವೆ. ನಮ್ಮ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದೆ. ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆದರೆ ಪರಿಣಾಮಮ ಎಷ್ಟು ಘೋರವಾಗಿರುತ್ತದೆ ಅಂತ ಇಡೀ ಜಗತ್ತು ನೋಡುತ್ತಿದೆ. ಉರಿಯಲ್ಲಿ ಪಾಕ್ ನಡೆಸಿದ ಶೆಲ್ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದೊಳಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು, ಈಗ ಆಪರೇಷನ್ ಸಿಂಧೂರ್ ನಡೆಸಿ ಪಾಕಿಗಳ ಬಗ್ಗು ಬಡೆಯಲು ನಮ್ಮ ಸೇನೆಯು ತನ್ನದೇ ಮೇಲುಗೈ ಸಾಧಿಸಿದೆ ಎಂದು ರಾಜನಾಥ್ ಸೇನೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಸೇನೆಯಿಂದ ಪಾಕ್ ನರಿ ಬುದ್ಧಿ ಬಟಾ ಬಯಲು..
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದ ಉಗ್ರರು ನೇಪಾಳಿ ಪ್ರಜೆ ಸೇರಿದಂತೆ 26 ಜನ ಪ್ರವಾಸಿಗರನ್ನು ಬಲಿ ಪಡೆದು ಕ್ರೌರ್ಯ ಮೆರೆದಿದ್ದರು. ಈ ದಾಳಿಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ತೀವ್ರಗೊಂಡು, ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ಬೆನ್ನಲ್ಲೇ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದವು. ಉಭಯ ದೇಶಗಳು ಭೂಮಿ, ಗಾಳಿ ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಒಪ್ಪಿಕೊಂಡ ನಂತರವೂ ಪಾಕಿಸ್ತಾನ ತನ್ನ ಉದ್ಧಟತನವನ್ನು ಮುಂದುವರೆಸಿತ್ತು. ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಶ್ರೀನಗರದಲ್ಲಿ ಡ್ರೋನ್ ದಾಳಿಗಳು ನಡೆದಿದ್ದವು. ದಾಳಿಗೆ ಸೇನೆ ದಿಟ್ಟ ಉತ್ತರ ನೀಡುವ ಮೂಲಕ ಪಾಕ್ ನರಿ ಬುದ್ಧಿಯನ್ನು ಬಟಾ ಬಯಲು ಮಾಡಿದೆ.