ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಪಾಕಿಸ್ತಾನದ ಭಯೋತ್ಪಾದಕತೆಯನ್ನು ಮಟ್ಟ ಹಾಕುವಲ್ಲಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವಿಚಾರವಾಗಿ ರಾಜಕೀಯ ನಾಯಕರು ಒಬ್ಬೊಬ್ಬರಾಗಿ ವಿವಾದದ ಅಲೆ ಎಬ್ಬಿಸುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದಷ್ಟೇ ಮಧ್ಯಪ್ರದೇಶದ ಅರಣ್ಯ ಸಚಿವ ವಿಜಯ್ ಶಾ ಆಪರೇಷನ್ ಸಿಂಧೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಲ್ ಸೋಫಿಯಾ ಖುರೇಷಿಯವ ಬಗ್ಗೆ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿದ್ದರು. ಈ ವಿವಾದ ತಣ್ಣಗಾಗುವುದರೊಳಗೆಯೇ ಮತ್ತೊಂದು ವಿವಾದ ಸೃಷ್ಟಿಯಾಗಿದೆ.
ಅದೇ ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಭರದಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಜಬಲ್ಪುರದಲ್ಲಿ ನಾಗರಿಕ ರಕ್ಷಣೆಯಲ್ಲಿ ತರಬೇತಿಗಾಗಿ ಬಂದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿ, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ಭಾರತ ಪಾಕಿಸ್ತಾನದ ಮೇಲೆ ಮಾಡಿದ ದಾಳಿಗಳಿಗಾಗಿ ಸೇನೆಯು ಪ್ರಧಾನಿ ನರೇಂದ್ರ ಮೋದಿಯವರ “ಪಾದಗಳಿಗೆ ನಮಸ್ಕರಿಸುತ್ತದೆ” ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ದೇವ್ಡಾ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ಇಡೀ ದೇಶ, ಸೇನೆಯು ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳಿಗೆ ನಮಸ್ಕರಿಸುತ್ತದೆ..
“ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಪ್ರತ್ಯೇಕಿಸಿ, ಅವರ ಧರ್ಮವನ್ನು ಕೇಳಿ ಕೇಳಿ, ಮಹಿಳೆಯರನ್ನು ಪಕ್ಕಕ್ಕೆ ಕರೆದೊಯ್ದು, ಪುರುಷರನ್ನು ಅವರ ಕುಟುಂಬ ಸದಸ್ಯರ ಮುಂದೆಯೇ, ಅವರ ಮಕ್ಕಳ ಎದುರೇ ಗುಂಡಿಕ್ಕಿ ಕೊಲ್ಲುವುದನ್ನು ನಾವು ನೋಡಿದ್ದೇವೆ. ಅಂದಿನಿಂದ, ಈ ದೇಶದ ಜನರು ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ ಸೇಡು ತೀರಿಸಿಕೊಳ್ಳುವವರೆಗೆ ವಿಶ್ರಮಿಸುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿಯವರನ್ನು ಎಷ್ಟು ಹೊಗಳಿದರು ಸಾಲದು ಎಂದು ಹೇಳಲು ಪೇಚಿಗೆ ಸಿಲುಕಿದ್ದಾರೆ. ಇಂದು, ಇಡೀ ದೇಶ, ಸೇನೆಯು ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳಿಗೆ ನಮಸ್ಕರಿಸುತ್ತದೆ, ಅವರು ತೆಗೆದುಕೊಂಡ ಬಲವಾದ ಕ್ರಮಕ್ಕಾಗಿ, ಅವರು ನೀಡಿದ ಪ್ರತಿಕ್ರಿಯೆಗಾಗಿ ದಯವಿಟ್ಟು ಅವರಿಗೆ ದೊಡ್ಡ ಚಪ್ಪಾಳೆ ಹೊಡೆಯಿರಿ ಎಂದು ಕಾರ್ಯಕ್ರಮದಲ್ಲಿ ಸಿಳ್ಳೇ ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ನಮ್ಮ ಸೈನಿಕರು ರಾಷ್ಟ್ರವನ್ನು ರಕ್ಷಿಸುತ್ತಾರೆ, ರಾಜಕಾರಣಿಗಳ ಅಹಂಕಾರವಲ್ಲ..
ಇನ್ನೂ ಮಧ್ಯಪ್ರದೇಶ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವಿಪಕ್ಷ ಕಾಂಗ್ರೆಸ್ ಇದೊಂದು ಈ ರೀತಿ ಹೇಳುವುದು ಅತಿರೇಕದ ವರ್ತನೆಯಾಗಿದೆ ಎಂದು ವಾಗ್ದಾಳಿ ನಡೆಸಿದೆ. ಇದು ನಮ್ಮ ಸಶಸ್ತ್ರ ಪಡೆಗಳಿಗೆ ಮಾಡಿರುವ ಅವಮಾನವಾಗಿದೆ. ನಮ್ಮ ಸೈನಿಕರು ರಾಷ್ಟ್ರವನ್ನು ರಕ್ಷಿಸುತ್ತಾರೆ, ರಾಜಕಾರಣಿಗಳ ಅಹಂಕಾರವಲ್ಲ. ಭಾರತೀಯ ಸೇನೆಯು ಪ್ರಧಾನಿ ಮೋದಿಯವರ ಪಾದಗಳಿಗೆ ನಮಸ್ಕರಿಸುತ್ತದೆ ಎಂದು ಹೇಳುವುದು ಅತಿರೇಕದ ಸಂಗತಿ ಮಾತ್ರವಲ್ಲ – ಇದು ನಮ್ಮ ಸಶಸ್ತ್ರ ಪಡೆಗಳ ತ್ಯಾಗ, ಶೌರ್ಯ ಮತ್ತು ಘನತೆಗೆ ಮಾಡಿದ ಅವಮಾನ. ಬಿಜೆಪಿ ನಾಯಕ ಜಗದೀಶ್ ದೇವ್ಡಾ ಅವರ ಮಾತುಗಳು ನಾಚಿಕೆಗೇಡಿನವು ಎಂದು ಯುವ ಕಾಂಗ್ರೆಸ್ ತನ್ನ ಟ್ವಿಟ್ಟರ್ ಪೋಸ್ಟ್‌ನಲ್ಲಿ ಕಿಡಿ ಕಾರಿದೆ.
ವಿಜಯ್ ಶಾ ಏನು ಹೇಳಿದ್ದರು..?
ಇಂದೋರ್ ಜಿಲ್ಲೆಯ ಮಾಹುವಿನ ರಾಯ್ಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಶಾ, ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸನ್ನು ಹೇಳಿ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದರು. ಭಾಷಣದಲ್ಲಿ, ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದರು. ಆ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ನಾವು ಕಳುಹಿಸಿದ್ದೇವೆ ಎಂದು ಹೇಳಿದ್ದರು.
ಭಾಷಣದಲ್ಲಿ ವಿಜಯ್ ಶಾ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಗ್ರರನ್ನು ಸದೆ ಬಡಿಯಲು ಮುಸ್ಲಿಂ ಸಮುದಾಯಕ್ಕೆ ಸೇರಿದ ಕರ್ನಲ್ ಸೋಫಿಯಾ ಖುರೇಷಿ ಅವರ ಹೆಸರನ್ನು ಸ್ಪಷ್ಟವಾಗಿ ಹೇಳದೇ ಇದ್ದರೂ ಅವರನ್ನು ಉಲ್ಲೇಖಿಸಿಯೇ ಭಾಷಣ ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಬಳಿಕ ಜಬ್ಬಲ್ಪುರ ಹೈಕೋರ್ಟ್ ಇದನ್ನು ಅಶ್ಲೀಲ ಭಾಷೆ ಎಂದು ಪರಿಗಣಿಸಿತ್ತು. ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು. ಬಳಿಕ ಕೋರ್ಟ್ ಸೇನಾಧಿಕಾರಿ ಕ್ಷಮೆ ಕೇಳಲು ಆದೇಶಿಸಿತ್ತು.