Thursday, July 31, 2025

Latest Posts

ಭಾರತೀಯರ ರಕ್ತದೊಂದಿಗೆ ಆಟವಾಡಿದವ್ರು ಮಣ್ಣಾಗಿದ್ದಾರೆ, ನಮ್ಮನ್ನ ವಿಶ್ವದ ಯಾವುದೇ ಶಕ್ತಿ ತಡೆಯೋಕಾಗಲ್ಲ : ಪಾಕ್‌ ವಿರುದ್ಧ ಮೋದಿ ಘರ್ಜನೆ..!

- Advertisement -

ರಾಜಸ್ತಾನ : ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಕೇವಲ 22 ನಿಮಿಷದ ಅವಧಿಯಲ್ಲಿ ಪಾಕಿಸ್ತಾನದ ಒಂಭತ್ತು ಪ್ರಮುಖ ವಾಯುನೆಲೆಗಳನ್ನು ನಾಶಪಡಿಸಲಾಗಿದೆ. ‘ಸಿಂಧೂರ್ ಬರೂದ್ ಬನ್ ಜಾತಾ ಹೈ‌, ಸಿಂಧೂರವು ಬಂದೂಕಿನ ಪುಡಿಯಾಗಿ ಬದಲಾದಾಗ ಏನಾಗುತ್ತದೆ ಅನ್ನೋದನ್ನು, ಅಲ್ಲದೆ ಇದು ಯಾವಾಗ ನಡೆಯಿತು ಎಂಬುದನ್ನು ಇಡೀ ಜಗತ್ತು ನೋಡಿದೆ, ಅಲ್ಲದೆ ಶತ್ರುಗಳೂ ಸಹ ನೋಡಿದ್ದಾರೆ. ಭಾರತದ ರಕ್ತದೊಂದಿಗೆ ಆಟವಾಡಿದ್ದಕ್ಕಾಗಿ ಪಾಕಿಸ್ತಾನ ಬೆಲೆ ತೆರಬೇಕಾಗುತ್ತದೆ. ಇದು ಭಾರತದ ನಿರ್ಣಯವಾಗಿದೆ. ಈ ಗಟ್ಟಿತನದಿಂದ ನಮ್ಮನ್ನು ಅಲುಗಾಡಿಸಲು ವಿಶ್ವದ ಯಾವುದೇ ಶಕ್ತಿಗೆ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಹೀಮ್ ಯಾರ್‌ ಖಾನ್‌ ಏರ್‌ಬೇಸ್‌ ಐಸಿಯುನಲ್ಲಿದೆ..

ರಾಜಸ್ತಾನದ ಬಿಕಾನೇರ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿಂದು ಮಾತನಾಡಿರುವ ಅವರು, ಪಾಕಿಸ್ತಾನದ ಸೇನೆ ಮತ್ತು ಆರ್ಥಿಕತೆಯು ಪ್ರತಿಯೊಂದು ಭಯೋತ್ಪಾದಕ ದಾಳಿಗೆ ಬೆಲೆ ತೆರಬೇಕಾಗುತ್ತದೆ… ಪಾಕಿಸ್ತಾನ ಬಿಕಾನೆರ್‌ನ ನಲ್ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು, ಆದರೆ ಅವರು ಯಾವುದೇ ಹಾನಿ ಮಾಡಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ರಹೀಮ್ ಯಾರ್ ಖಾನ್ ವಾಯುನೆಲೆ ಗಡಿಯ ಆಚೆ ಇದೆ; ಅದು ಮತ್ತೆ ಯಾವಾಗ ಕಾರ್ಯನಿರ್ವಹಿಸುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಅದು ಈಗ ಐಸಿಯುನಲ್ಲಿದೆ. ಭಾರತೀಯ ಸೇನೆಯ ದಾಳಿ ಅದನ್ನು ನಾಶಪಡಿಸಿದೆ ಎಂದು ಪಾಕಿಸ್ತಾನದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

ಪಹಲ್ಗಾಮ್‌ ದಾಳಿಯ ಗುಂಡುಗಳು ಭಾರತೀಯರ ಹೃದಯ ಚುಚ್ಚಿದ್ದವು..

ಏಪ್ರಿಲ್ 22 ರಂದು ನಡೆದ ದಾಳಿಗೆ ನಾವು 22 ನಿಮಿಷಗಳಲ್ಲಿ ಭಯೋತ್ಪಾದಕರ 9 ಅಡಗುತಾಣಗಳನ್ನು ನಾಶಪಡಿಸುವ ಮೂಲಕ ಪ್ರತಿಯಾಗಿ ಪ್ರತಿಕ್ರಿಯಿಸಿದ್ದೇವೆ. ಬಾರತೀಯರನ್ನು ಕೆಣಕಿದವರು ಮಣ್ಣಾಗಿ ಹೋಗಿದ್ದಾರೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಧರ್ಮವನ್ನು ಕೇಳಿ ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿಹಾಕಿದ್ದರು. ಪಹಲ್ಗಾಮ್‌ನಲ್ಲಿ ದಾಳಿ ನಡೆಯಿತು, ಆದರೆ ಆ ಗುಂಡುಗಳು 1.4 ಬಿಲಿಯನ್ ಭಾರತೀಯರ ಹೃದಯಗಳನ್ನು ಚುಚ್ಚಿದವು. ಒಂದೇ ಧ್ವನಿಯಲ್ಲಿ ಒಗ್ಗೂಡಿ, ಪ್ರತಿಯೊಬ್ಬ ಭಾರತೀಯರು ಭಯೋತ್ಪಾದನೆಯನ್ನು ಮಟ್ಟಹಾಕಕುವಲ್ಲಿ ಕಲ್ಪನೆಗೂ ಮೀರಿದ ಶಿಕ್ಷೆಗಾಗಿ ಆಗ್ರಹಿಸಿದ್ದರು. ಭಾರತೀಯ ಸಶಸ್ತ್ರ ಪಡೆಗಳ ಧೈರ್ಯದಿಂದಾಗಿ ನಾವು ಇಂದು ಗಟ್ಟಿಯಾಗಿ ನಿಂತಿದ್ದೇವೆ. ನಮ್ಮ ಸೇನೆಗಳ ಪರಾಕ್ರಮಕ್ಕೆ ಪಾಕಿಸ್ತಾನ ತಲೆಬಾಗುವಂತಾಯಿತು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಇಂದು ನಿಮ್ಮ ಆಶೀರ್ವಾದದಿಂದ ನಾವೆಲ್ಲರೂ ಸೈನ್ಯದ ಶೌರ್ಯಕ್ಕೆ ಸಾಕ್ಷಿಯಾಗಿದ್ದೇವೆ. ನಮ್ಮ ಸರ್ಕಾರವು ಮೂರು ಸೈನ್ಯಗಳಿಗೆ ಮುಕ್ತ ಅಧಿಕಾರವನ್ನು ನೀಡಿದೆ ಮತ್ತು ಮೂರು ಸೈನ್ಯಗಳು ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿವೆ. ಪಾಕಿಸ್ತಾನಕ್ಕೆ ಅಷ್ಟೊಂದು ದುರ್ಗತಿಯನ್ನು ನಮ್ಮ ಪಡೆಗಳು ತಂದಿಟ್ಟಿವೆ ಎಂದು ಮೋದಿ ಪಾಕ್‌ ವಿರುದ್ಧ ಅಬ್ಬರಿಸಿದ್ದಾರೆ.

ಭಾರತದ ನೀರು ನಿಮಗೆ ಸಿಗಲ್ಲ..

ಭಾರತಕ್ಕೆ ನ್ಯಾಯಯುತವಾಗಿ ಸೇರಬೇಕಾದ ನೀರನ್ನು ಪಾಕಿಸ್ತಾನ ಪಡೆಯುವುದಿಲ್ಲ, ಪಾಕಿಸ್ತಾನದೊಂದಿಗೆ ವ್ಯಾಪಾರ ಅಥವಾ ಮಾತುಕತೆ ನಡೆಯುವುದಿಲ್ಲ. ಅದರೊಟ್ಟಿಗೆ ಮಾತುಕತೆಯಾದರೆ ಅದು ಕೇವಲ ಪಿಒಕೆಯ ವಿಚಾರಕ್ಕೆ ಮಾತ್ರ. ಪಾಕಿಸ್ತಾನಕ್ಕೆ ಭಾರತದ ನೀರು ಸಿಗುವುದಿಲ್ಲ, ಭಾರತದ ರಕ್ತದೊಂದಿಗೆ ಆಟವಾಡಿದ್ದಕ್ಕಾಗಿ ಅವರು ಇನ್ನಷ್ಟು ಹೆಚ್ಚು ಬೆಲೆ ತೆರಬೇಕಾಗುತ್ತದೆ. ಇದು ಭಾರತದ ನಿರ್ಣಯ ಮತ್ತು ವಿಶ್ವದ ಯಾವುದೇ ಶಕ್ತಿಯೂ ಈ ನಿರ್ಣಯದಿಂದ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ನೇರ ಹೋರಾಟದಲ್ಲಿ ಪಾಕಿಸ್ತಾನ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ನೇರ ಯುದ್ಧ ಆದಾಗಲೆಲ್ಲ ಪಾಕಿಸ್ತಾನ ಮತ್ತೆ ಮತ್ತೆ ಸೋಲನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ಪಾಕಿಸ್ತಾನ ಭಯೋತ್ಪಾದನೆಯನ್ನು ಭಾರತದ ವಿರುದ್ಧ ಹೋರಾಡಲು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಭಾರತ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ ಮತ್ತು ದೇಶದ ಮೇಲೆ ಭಯೋತ್ಪಾದಕ ದಾಳಿ ನಡೆದರೆ ಅದು ಸೂಕ್ತ ಉತ್ತರವನ್ನು ನೀಡುತ್ತದೆ. ‘ಸಮಯ ಮತ್ತು ಯಾವ ವಿಧಾನ ಎಂಬುದನ್ನು ನಮ್ಮ ಸಶಸ್ತ್ರ ಪಡೆಗಳು ನಿರ್ಧರಿಸುತ್ತವೆ ಎಂದು ಪ್ರಧಾನಿ ಮೋದಿ ಭಯೋತ್ಪಾದನೆ ಹಾಗೂ ಪಾಕಿಸ್ತಾನದ ವಿರುದ್ಧ ಗರ್ಜಿಸಿದ್ದಾರೆ.

ದೇಶದಲ್ಲಿ ರಕ್ತವನ್ನು ಹರಿಸಿದವರು ಇಂದು ಪ್ರತಿಯೊಂದು ಹನಿಯನ್ನೂ ಲೆಕ್ಕ ಹಾಕಿದ್ದಾರೆ. ಭಾರತ ಮೌನವಾಗಿರುತ್ತದೆ ಎಂದು ಭಾವಿಸಿದ್ದವರು ಇಂದು ತಮ್ಮ ಮನೆಗಳಲ್ಲಿ ಅಡಗಿಕೊಂಡಿದ್ದಾರೆ. ತಮ್ಮ ಶಸ್ತ್ರಾಸ್ತ್ರಗಳ ಬಗ್ಗೆ ಹೆಮ್ಮೆಪಡುತ್ತಿದ್ದವರು ಇಂದು ಅವಶೇಷಗಳ ರಾಶಿಯಡಿಯಲ್ಲಿ ಹೂತುಹೋಗಿದ್ದಾರೆ” ಎಂದು ಪ್ರಧಾನಿ ಮೋದಿ ಪಾಕಿಸ್ತಾನದ ವಿರುದ್ಧ ಲೇವಡಿ ಮಾಡಿದ್ದಾರೆ.

- Advertisement -

Latest Posts

Don't Miss