Political News: ಈ ಬಾರಿ ಅವಧಿಗಿಂತ ಮೊದಲೇ ಮಳೆರಾಯ ರಾಜ್ಯಕ್ಕೆ ಆಗಮಿಸಿ ಬರ ತಪ್ಪಿಸಿದ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ ಸರ್ಕಾರಕ್ಕೆ ಒಟ್ಟಾರೆ 88 ಕೋಟಿ ರೂಪಾಯಿ ಉಳಿತಾಯವಾಗಿದೆ. ಪ್ರಮುಖವಾಗಿ ಇದು ಸರ್ಕಾರಿ ಶಾಲಾ ಮಧ್ಯಾಹ್ನ ಬಿಸಿಯೂಟ ಯೋಜನೆಯಿಂದ ಉಳಿತಾಯವಾಗಿರುವ ಹಣವಾಗಿದೆ ಎನ್ನುವುದು ಗಮನಾರ್ಹವಾಗಿದೆ.
ಇನ್ನೂ ಶಾಲಾ ಶಿಕ್ಷಣ ಇಲಾಖೆಯು ರಾಜ್ಯದಲ್ಲಿ ಬರ ಪೀಡಿತ ಜಿಲ್ಲೆಗಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಬಿಸಿಯೂಟ ನೀಡುತ್ತಾ ಬಂದಿದೆ. 2025ರಲ್ಲಿ ರಾಜ್ಯಕ್ಕೆ ಮುಂಗಾರು ಮತ್ತು ಚಂಡಮಾರುತದ ಪರಿಣಾಮ ಆಗಿಂದಾಗ್ಗೆ ಮಳೆಯಾಗುತ್ತಲೇ ಇದ್ದುದರಿಂದ ರಾಜ್ಯಕ್ಕೆ ಆವರಿಸಬಹುದಾಗಿದ್ದ ಬರಗಾಲ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವ ಅನಿವಾರ್ಯತೆ ಕೂಡ ಎದುರಾಗಲಿಲ್ಲ.
ಸರ್ಕಾರಕ್ಕೆ 88 ಕೋಟಿ ರೂಪಾಯಿ ಉಳಿತಾಯ..
ಹವಾಮಾನದಲ್ಲಿನ ಬದಲಾವಣೆಯಿಂದ ನಿಗದಿತ ಸಮಯಕ್ಕಿಂತ ಮೊದಲೇ ಮುಂಗಾರು ಎಂಟ್ರಿ ಕೊಟ್ಟಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒಟ್ಟು 88 ಕೋಟಿ ರೂಪಾಯಿಗಳ ಉಳಿತಾಯವಾಗಿದ್ದು, ಉಭಯ ಸರ್ಕಾರಗಳ ಹೊರೆಯನ್ನು ತಗ್ಗಿಸಿದಂತಾಗಿದೆ. ಅಲ್ಲದೆ ಕಳೆದ 2024ರಲ್ಲಿ ಬರಪೀಡಿತ ಜಿಲ್ಲೆಗಳಲ್ಲಿ 41 ದಿನಗಳ ಕಾಲ 26.09 ಲಕ್ಷ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯು ಬಿಸಿಯೂಟ ನೀಡಿತ್ತು. ಕೇಂದ್ರ ಸರ್ಕಾರ 55.82 ಹಾಗೂ ರಾಜ್ಯ ಸರ್ಕಾರ 32.58 ಕೋಟಿ ರೂಪಾಯಿಗಳ ವೆಚ್ಚವನ್ನು ಮಾಡಿತ್ತು.
ಬರದಲ್ಲಿ 60 ಸಾವಿರ ಅಡುಗೆ ಸಹಾಯಕರಿಂದ ಕೆಲಸ..
ಈ ಯೋಜನೆಯಡಿ ಕೇಂದ್ರ ಸರ್ಕಾರ ಶೇಕಡಾ 60 ರಷ್ಟು ಮತ್ತು ರಾಜ್ಯ ಸರ್ಕಾರ ಶೇಕಡಾ 40ರ ಅನುಪಾತದಲ್ಲಿ ಅನುದಾನವನ್ನು ನೀಡಲಿವೆ. ಊಟ ಬಡಿಸಲು 60,826 ಅಡುಗೆ ಸಹಾಯಕರು ಕೆಲಸ ಮಾಡಿದ್ದರು. ಈ ವೇಳೆ ಪ್ರತಿ ವಿದ್ಯಾರ್ಥಿಗೆ 5.45 ರೂಪಾಯಿಗಳಂತೆ ವೆಚ್ಚ ಮಾಡಿದೆ. ಇನ್ನೂ ಬರಗಾಲದ ವೇಳೆ ಊಟ ಮಾಡಿದ ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ ಶಾಲೆಯವರೇ ಹೆಚ್ಚಾಗಿದ್ದಾರೆ. 16,25 ಲಕ್ಷ ಪ್ರಾಥಮಿಕ ಮತ್ತು 9.83 ಲಕ್ಷ ಪ್ರೌಢಶಾಲಾ ವಿದ್ಯಾರ್ಥಿಗಳು ಊಟ ಮಾಡಿದ್ದಾರೆ.
ಅಲ್ಲದೆ ಕೇಂದ್ರ ಸರ್ಕಾರ 2025 ಹಾಗೂ 26ನೇ ಸಾಲಿನಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ 244 ಶೈಕ್ಷಣಿಕ ದಿನಗಳಿಗೆ 40.07 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವುದಕ್ಕೆ ಅನುಮತಿ ನೀಡಿದೆ. ಸರ್ಕಾರ 607 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದೆ.
ಏನಿದು ಯೋಜನೆ..?
ಇನ್ನೂ ಈ ಯೋಜನೆಯಡಿಯಲ್ಲಿ ಬರಗಾಲ ಮತ್ತು ಬರಪೀಡಿತ ಪ್ರದೇಶಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡುತ್ತದೆ. ಈ ರೀತಿ ಘೋಷಿಸಿದ ಜಿಲ್ಲೆಗಳಲ್ಲಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪಿಎಂ ಪೋಷಣ್ ಯೋಜನೆಯಡಿ ಮಧ್ಯಾಹ್ನವನ್ನು ಶಿಕ್ಷಣ ಇಲಾಖೆ ನೀಡುತ್ತದೆ. ಈ ವರ್ಷ ಬರಗಾಲ ಘೋಷಣೆಯಾಗದ ಹಿನ್ನೆಲೆಯಲ್ಲಿ ಬೇಸಿಗೆ ರಜೆಯಲ್ಲಿ ಊಟ ನೀಡುವ ಅವಶ್ಯಕತೆ ಹಾಗೂ ಅನಿವಾರ್ಯತೆಯೂ ಬಂದೊದಗಲಿಲ್ಲ. ಹೀಗಾಗಿ, ಅಂದಾಜು 88 ಕೋಟಿ ರೂಪಾಯಿ ಉಳಿತಾಯವಾಗಿಲದೆ. ಈ ರೀತಿ ಉಳಿತಾಯದ ಹಣವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಆ ವೇಳೆ ಮಾತ್ರವಷ್ಟೇ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ ಎಂಬುದಾಗಿ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.