Political News: ಸತತ 18 ವರ್ಷಗಳ ನಂತರ ಚೊಚ್ಚಲ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಬಂದಿದ್ದ 10 ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಟ್ರೋಫಿ ಗೆದ್ದ ತಂಡವನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಯುವಕ, ಯುವತಿಯರು ಕ್ರೀಡಾಂಗಣದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಈ ವೇಳೆ ಉಂಟಾದ ತಳ್ಳಾಟ, ನೂಕುನುಗ್ಗಲಿನಿಂದ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಓರ್ವ ಮಗು, ಆರು ಪುರುಷರು, ಮೂರು ಮಹಿಳೆಯರು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ.
ನಮ್ಮ ಪೊಲೀಸರು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ, ನಿಯಂತ್ರಿಸಲಾಗದ ಜನಸಾಗರವಿತ್ತು..
ಇನ್ನೂ ಇದೇ ವಿಚಾರದ ಕುರಿತು ಮೊದಲ ಹೇಳಿಕೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಪೊಲೀಸರು ಪರಿಸ್ಥಿತಿ ನಿಭಾಯಿಸೋಕೆ ಎಲ್ಲ ರೀತಿಯ ಶಕ್ತಿ ಮೀರಿ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ನನ್ನ ಎಲ್ಲ ಅಧಿಕಾರಿಗಳಿಗೆ ತಿಳಿಸಿ ಕೇವಲ ಹತ್ತು ನಿಮಿಷದಲ್ಲಿ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದೇವೆ. ನಮ್ಮ ಭಾಷಣವನ್ನೂ ಸಹ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಮೆರವಣಿಗೆಯನ್ನು ಕೂಡ ರದ್ದುಗೊಳಿಸಿದ್ದೇವೆ. ಬಹಳಷ್ಟು ಒತ್ತಾಯ ಬಂದಿತ್ತು, ಆದರೂ ಸಹ ಪರಿಸ್ಥಿತಿ ನೋಡಿ ಎಲ್ಲವನ್ನೂ ಮೊಟಕುಗೊಳಿಸಿದ್ದೇವೆ. 1 ಗಂಟೆಯಯಷ್ಟು ನಡೆಯಬೇಕಿದ್ದ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಕನಿಷ್ಠ ವಿಧಾಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ಮೆರವಣಿಗೆ ಮಾಡಬೇಕೆಂಬ ಮನವಿ ಬಂದಿತ್ತು ಎಂದು ಡಿಸಿಎಂ ತಿಳಿಸಿದ್ದಾರೆ. ಇದು ನಿಯಂತ್ರಿಸಲಾಗದ ಜನಸಾಗರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ದುರದೃಷ್ಟಕರ ಘಟನೆಯಾಗಿದೆ, ಇಷ್ಟೊಂದು ಜನರು ಸೇರುವ ನಿರೀಕ್ಷೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನೂ ಈ ದುರ್ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ, ಸಿಎಂ ಹಾಗೂ ಡಿಸಿಎಂ ಅವರೇ ಇದಕ್ಕೆ ಕಾರಣ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಸಂಭ್ರಮಿಸಬೇಕಾದ ಘಳಿಗೆಯನ್ನ ಕಾಂಗ್ರೆಸ್ ಸೂತಕ ಮಾಡಿದೆ..
ಇನ್ನೂ ಐಪಿಎಲ್ ಪಟ್ಟ ಗೆದ್ದಿರುವ ಆರ್ ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿ ಸಂಭ್ರಮಿಸಬೇಕಾದ ಘಳಿಗೆಯನ್ನ ಸೂತಕದ ಘಳಿಗೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿವೇಚನಾರಹಿತ ದುರಾಡಳಿತ ಇವತ್ತು ಅಮಾಯಕ ಜೀವಗಳನ್ನ ಬಲಿ ತೆಗೆದುಕೊಂಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಕನ್ನಡಿಗರ ಜನಪ್ರಿಯ ಆರ್ ಸಿಬಿ ತಂಡ ಚಾಂಪಿಯನ್ ಪಟ್ಟ ಗೆದ್ದ ಸಾಧನೆಯಲ್ಲಿ ತಾನೂ ಒಂದಷ್ಟು ಕ್ರೆಡಿಟ್ ಪಡೆಯಬೇಕು ಎನ್ನುವ ಆತುರದಲ್ಲಿ ಸರಿಯಾದ ಪೂರ್ವಸಿದ್ಧತೆ ಇಲ್ಲದೆ, ಯೋಜನೆ ಇಲ್ಲದೆ, ಪೊಲೀಸರಿಗೆ ಕಾಲಾವಕಾಶ ಕೊಡದೆ ಅಭಿನಂದನಾ ಸಮಾರಂಭ ನಡೆಸಲು ರಾಜ್ಯ ಸರ್ಕಾರ ದುಂಬಾಲು ಬಿದ್ದಿದ್ದೆ ಈ ಅನಾಹುತಕ್ಕೆ ಕಾರಣ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಸರ್ಕಾರದ ಸ್ಪಷ್ಟ ವೈಫಲ್ಯ, ಅದಕ್ಕಿಂತ ಹೆಚ್ಚಾಗಿ ಬೇಜವಾಬ್ದಾರಿತನ..!
ಐಪಿಎಲ್ ಪಂದ್ಯಾವಳಿಯ ಫೈನಲ್ ಮ್ಯಾಚ್ ನಿನ್ನೆ ರಾತ್ರಿಯಷ್ಟೇ ಮುಗಿದಿದೆ. ನಿನ್ನೆ ರಾತ್ರಿಯೆಲ್ಲಾ ನಗರದಾದ್ಯಂತ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವಲ್ಲಿ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಗೆ ಇವತ್ತು ಬೆಳಿಗ್ಗೆ ಏಕಾಏಕಿ ಮತ್ತೊಮ್ಮೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿ ಎಂದರೆ ಅದು ಕಷ್ಟಸಾಧ್ಯ ಎನ್ನುವ ಕನಿಷ್ಠ ಪರಿಜ್ಞಾನವೂ ಇಲ್ಲದಿದ್ದಿದ್ದು ಸರ್ಕಾರದ ಸ್ಪಷ್ಟ ವೈಫಲ್ಯ ಮತ್ತು ಅದಕ್ಕಿಂತ ಹೆಚ್ಚಾಗಿ ಬೇಜವಾಬ್ದಾರಿತನ ಎಂದು ವಾಗ್ದಾಳಿ ನಡೆಸಿದ್ದಾರೆ.
ಚಾಂಪಿಯನ್ ಆರ್ ಸಿಬಿ ತಂಡವನ್ನ ಸ್ವಾಗತಿಸಲು, ತಮ್ಮ ನೆಚ್ಚಿನ ಆಟಗಾರರನ್ನು ನೋಡಲು, ಅವರ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಎನ್ನುವುದನ್ನ ಅಂದಾಜಿಸುವಲ್ಲಿ ಸರ್ಕಾರ ಎಡವಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಜನ ಸಂದಣಿ ನಿರೀಕ್ಷಿಸಿ ಹೆಚ್ಚಿನ ಕಾಲಾವಕಾಶ ತೆಗೆದುಕೊಂಡು ವಾರಾಂತ್ಯದಲ್ಲಿ ಈ ಕಾರ್ಯಕ್ರಮ ಮಾಡಬಹುದಿತ್ತು ಎನ್ನಿಸುತ್ತಿದೆ ಎಂದು ಹೇಳಿದ್ದಾರೆ.
ಮೃತರ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಬೇಕು..
ಈ ಸಾವುಗಳಿಗೆ ರಾಜ್ಯ ಸರ್ಕಾರವೇ ಹೊಣೆ ಹೊತ್ತು ಮೃತರ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಬೇಕು. ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕು. ಮೃತ ದುರ್ದೈವಿಗಳ ಕುಟುಂಬಗಳ ದುಃಖದಲ್ಲಿ ಇಡೀ ರಾಜ್ಯವೇ ಭಾಗಿಯಾಗಿದೆ ಎಂದು ಅಶೋಕ್ ತಮ್ಮ ಟ್ವೀಟ್ಟರ್ನಲ್ಲಿ ಪೋಸ್ಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಅಲ್ಲದೆ ಘಟನೆಯ ಬೆನ್ನಲ್ಲೇ ಗಾಯಾಳುಗಳು ದಾಖಲಾಗಿರುವ ಬೌರಿಂಗ್, ವೈದೇಹಿ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
ವಿಜಯೋತ್ಸವದಲ್ಲಿ ಭಾಗಿಯಾಗಲು ಬಂದವರು ಮಸಣಕ್ಕೆ..
ಇನ್ನೂ 18 ವರ್ಷಗಳ ವನವಾಸದ ಬಳಿಕ ಐಪಿಯಲ್ ಕಪ್ ಎತ್ತಿ ಸಂಭ್ರಮಿಸುತ್ತಿದ್ದ ವೇಳೆ ಈ ದುರಂತೆ ಸಂಭವಿಸಿ ನಿಜಕ್ಕೂ ಕನ್ನಡಿಗರು ಕಣ್ಣೀರಿನಲ್ಲಿರುವಂತಾಗಿದೆ. ನೋಡ ನೋಡುತ್ತಿದ್ದಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮದಿಂದ ಕಾಲ್ತುಳಿತ ಸಂಭವಿಸಿದೆ. ಇದನೆಲ್ಲ ನೋಡಿದಾಗ ಯಾರನ್ನೂ ದೂಷಿಸುವುದು ಎನ್ನುವಂತಾಗಿದ್ದು, ಆದರೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಸರ್ಕಾರದ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಕೆಸರೆರಚಾಟ ಪ್ರಾರಂಭವಾಗಿದೆ. ಆದರೆ ವಿಜಯೋತ್ಸವದಲ್ಲಿ ಭಾಗಿಯಾಗಲು ಬಂದವರು ಅನ್ಯಾಯವಾಗಿ ಮಸಣಕ್ಕೆ ಹೋಗುವಂತಾಗಿದ್ದು ಮಾತ್ರ ವಿಪರ್ಯಾಸವೇ ಸರಿ..