ಬಿ.ಆರ್. ಪಾಟೀಲ್, ರಾಜು ಕಾಗೆ ಸೇರಿದಂತೆ ಸ್ವಪಕ್ಷೀಯರ ಬಹಿರಂಗ ಹೇಳಿಕೆಗಳು ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ. ಆಂತರಿಕ ಕಲಹ, ಅಸಮಾಧಾನಕ್ಕೆ ಮದ್ದು ಅರೆಯಲು ದೆಹಲಿ ವರಿಷ್ಠರು ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದಿನಿಂದ 3 ದಿನಗಳ ಕಾಲ ಅಸಮಾಧಾನಿತ ಶಾಸಕರ ಜೊತೆ ಒನ್ ಟು ಒನ್ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಪಾಳಯದಲ್ಲಿ ಈ ಸರಣಿ ಸಭೆಗಳು ಭಾರೀ ಬದಲಾವಣೆಗೆ ಕಾರಣವಾಗುತ್ತಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಎಂಟ್ರಿ ಕೊಟ್ಟಿದ್ದಾರೆ. ಇವರು ಬರೋಬ್ಬರಿ 40ಕ್ಕೂ ಹೆಚ್ಚು ಹಿರಿಯ ಮತ್ತು ನೂತನ ಶಾಸಕರ ಜೊತೆ ಮೀಟಿಂಗ್ ಮಾಡಲಿದ್ದಾರೆ. ಪ್ರತಿ ಶಾಸಕರಿಗೂ 10 ನಿಮಿಷಗಳ ಕಾಲ ಸಮಯ ಕೊಟ್ಟಿದ್ದು, ಮುಖಾಮುಖಿ ಮಾತುಕತೆ ನಡೆಯಲಿದೆ.
ವಸತಿ ಇಲಾಖೆಯಲ್ಲಿ ಲಂಚದ ಆರೋಪ ಮಾಡಿದ್ದ ಬಿ.ಆರ್. ಪಾಟೀಲ್, ಬೆಂಬಲ ವ್ಯಕ್ತಪಡಿಸಿದ್ದ ರಾಜುಕಾಗೆ ಸೇರಿ 40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ಜೊತೆ ಸುರ್ಜೆವಾಲ ಹೈವೋಲ್ಟೇಜ್ ಮಾತುಕತೆ ನಡೆಯುತ್ತಿದೆ. ಸ್ವತಃ ಸುರ್ಜೇವಾಲಾ ಅವರೇ ಕರೆ ಮಾಡಿ ಬುಲಾವ್ ಕೊಟ್ಟಿದ್ದು, ಕೆಲವೊಂದು ಮಾಹಿತಿಗಳ ಪಟ್ಟಿಯನ್ನೂ ತರುವಂತೆ ಸೂಚಿಸಿದ್ದಾರೆ. ಸುಮಾರು 6 ಪ್ರಶ್ನೆಗಳ ಪಟ್ಟಿ ಸಿದ್ಧಪಡಿಸಿದ್ದು, ಕಾರಣ ಸಹಿತ ಉತ್ತರಿಸುವಂತೆ ಕಟ್ಟಪ್ಪಣೆ ಮಾಡಿದ್ದಾರೆ.
ಹೈಕಮಾಂಡ್ 6 ಪ್ರಶ್ನೆಗಳು!
1) ನಿಮ್ಮ ಕ್ಷೇತ್ರಗಳಲ್ಲಿ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹೇಗಿದೆ?
2) ನಿಮ್ಮ ಕ್ಷೇತ್ರ, ಜಿಲ್ಲೆಯ ರಾಜಕೀಯ, ಸಾಮಾಜಿಕ ಸಮಸ್ಯೆಗಳೇನು? ಸರ್ಕಾರ ಅವುಗಳನ್ನು ಹೇಗೆ ಬಗೆಹರಿಸಬೇಕು?
3) ನಿಮ್ಮ ಕ್ಷೇತ್ರಗಳಲ್ಲಿ ಬಾಕಿ ಇರುವ ಅಭಿವೃದ್ಧಿ ಕಾರ್ಯ, ಸಮಸ್ಯೆ, ಯಾವ ಇಲಾಖೆಯ ಅಭಿವೃದ್ಧಿ ಕೆಲಸ ಬಾಕಿ ಇದೆ. ಅನುದಾನ ಎಷ್ಟು ಅನ್ನೋದನ್ನ ಪಟ್ಟಿ ಕೊಡಿ.
4) ನಿಮ್ಮ ಕ್ಷೇತ್ರದಲ್ಲಿ ಬ್ಲಾಕ್ ಕಾಂಗ್ರೆಸ್, ಯೂತ್ ಕಾಂಗ್ರೆಸ್, ಎನ್‌ಎಸ್‌ಯುಐ, ಮಹಿಳಾ ಘಟಕ, ಸೇವಾದಳ, ರೈತ ಘಟಕ, ಒಬಿಸಿ, ಅಲ್ಪಸಂಖ್ಯಾತ ಘಟಕ ರಚನೆ ಆಗಿದೆಯಾ?
5) ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳ ಪಟ್ಟಿ ತನ್ನಿ. ಎಷ್ಟು ದಿನಗಳಿಂದ ಕೆಲಸ ಮಾಡುತ್ತಿದೆ? ನಿಗಮ ಮಂಡಳಿಯಲ್ಲಿ ಕ್ಷೇತ್ರದ ಯಾರಿಗೆ ಸ್ಥಾನಮಾನ ಬೇಕು? ಅವರ ಹೆಸರು, ಏಕೆ ಕೊಡಬೇಕು ಎಂದು ಕಾರಣ ಕೊಡಿ.
6) ಬೇರೆ ಸಲಹೆಗಳು ಏನಾದರೂ ಇವೆಯೇ?
ಇಷ್ಟೇ ಅಲ್ಲದೇ, ಸುರ್ಜೇವಾಲ ಎದುರು ಶಾಸಕರು ತಮ್ಮ ವೈಯಕ್ತಿಯ ಅಭಿಪ್ರಾಯಗಳನ್ನೂ ಹಂಚಿಕೊಳ್ಳುವ ಸಾಧ್ಯತೆ ಇದೆ. ಸಿಎಂ ಬದಲಾವಣೆ ವಿಚಾರ, ಹೊಸ ಸಿಎಂ ಬೇಕೋ ಅಥವಾ ಸಿದ್ದರಾಮಯ್ಯ ಅವರೇ ಮುಂದುವರೆಯಬೇಕಾ? ಪಕ್ಷಕ್ಕೆ ಸಂಘಟನೆ ಮಾಡಲು ಯಾರು ಸಮರ್ಥರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿಯೂ ಅಭಿಪ್ರಾಯ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಶಾಸಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಸುರ್ಜೇವಾಲ ಅವರು ದೆಹಲಿಗೆ ತೆರಳಲಿದ್ದಾರೆ. ಈ ವರದಿ ಆಧಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಚಿವರ ಮೌಲ್ಯಮಾಪನ ಮಾಡಲಿದೆ. ಸೆಪ್ಟೆಂಬರ್ ಕ್ರಾಂತಿ ಅನ್ನೋ ಚರ್ಚೆಯಲ್ಲಿ ಸಂಪುಟ ವಿಸ್ತರಣೆಗೆ ಶಾಸಕರ ಅಭಿಪ್ರಾಯವೂ ಮಾನದಂಡ ಆಗಲಿದೆ.