ಲಂಡನ್‌ನಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ MSc ಪದವೀಧರನನ್ನು ಕೊಂದು ಹಾಕಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಂಎಸ್ಸಿ ಪದವೀಧರನೊಬ್ಬನಿಗೆ ಕೆಲಸದ ಭರವಸೆಯಿಂದ 11 ಲಕ್ಷ ರೂ. ವಂಚನೆ ಮಾಡಿ, ಕೊನೆಗೆ ಆತನನ್ನೇ ಕೊಲೆ ಮಾಡಿ ಬಾವಿಗೆ ಬಿಸಾಕಿರುವ ಅಮಾನವೀಯ ಘಟನೆ ನಡೆದಿದೆ.
ಚಿಂತಾಮಣಿಯ ಜಿ ರಾಮಪುರದ 30 ವರ್ಷದ ರಾಮಾಂಜಿ, MSc ಪದವೀಧರನಾಗಿದ್ದರು. ಬೆಂಗಳೂರಿನ ಯಲಹಂಕದ ಒಂದು ಕೋಚಿಂಗ್ ಸೆಂಟರ್‌ನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದರು. ಬಾಲ್ಯದಲ್ಲಿ ತಾಯಿ-ತಂದೆಯನ್ನು ಕಳೆದುಕೊಂಡಿದ್ದ ರಾಮಾಂಜಿಗೆ, ಅಣ್ಣ-ಅತ್ತಿಗೆಯೇ ಎಲ್ಲವೂ ಆಗಿದ್ದರು.
ಈ ನಡುವೆ ರಾಮಾಂಜಿಗೆ ತಮ್ಮ ಗ್ರಾಮದ ಪಕ್ಕದಲ್ಲಿನ ದೊಡ್ಡಗುಟ್ಟಹಳ್ಳಿಯ ಸುಧಾಕರ್ ಎಂಬಾತನ ಪರಿಚಯವಾಗುತ್ತದೆ. ಲಂಡನ್‌ನಲ್ಲಿ ಉನ್ನತ ಉದ್ಯೋಗದ ಭರವಸೆ ನೀಡಿದ ಸುಧಾಕರ್, ನಯವಾದ ಮಾತುಗಳಿಂದ 11 ಲಕ್ಷ ರೂ ಹಣ ತೆಗೆದುಕೊಂಡಿದ್ದ. ಈ ಹಣದಿಂದ ಲಂಡನ್ ವೀಸಾ, ಟಿಕೆಟ್, ಮತ್ತು ಇತರ ವೆಚ್ಚಗಳ ಹೆಸರಿನಲ್ಲಿ ಸುಧಾಕರ್ ತಾನು ಮತ್ತು ಸ್ನೇಹಿತರೊಂದಿಗೆ ಮೋಜುಮಸ್ತಿ ಮಾಡುತ್ತಿದ್ದ.
ರಾಮಾಂಜಿ ಯಾವಾಗ ಕೆಲಸ ಕೊಡಿಸುತ್ತೀಯಾ ಅಂತ ಕೇಳಿದ್ದಕ್ಕೆ ಇಂದು, ನಾಳೆ ಆಗುತ್ತೆ. ವೀಸಾ ಸಮಸ್ಯೆ ಅಂತ ಕಥೆ ಹೊಡ್ಕೊಂಡು ಕೆಲ ಸರಿ ಏರ್ಪೋರ್ಟ್ಗೆ ಕರೆದುಕೊಂಡು ಹೋಗಿ ಅಲ್ಲಿಂದ ಏನೋ ಕಾರಣ ಹೇಳಿ ವಾಪಸ್ ಕರೆದುಕೊಂಡು ಬಂದು ದಿನ ಕಳೆದಿದ್ದಾನೆ. ಇತ್ತ ರೋಸಿ ಹೋಗಿದ್ದಂತಹ ರಾಮಾಂಜಿ ಪದೇ ಪದೇ ಹಣ ವಾಪಸ್ ಕೇಳಿದ್ದಕ್ಕೆ ಸುಧಾಕರ್ ತನ್ನ ಸಹೋದರ ಮನೋಜ್ ಹಾಗೂ ಸ್ನೇಹಿತ ಮಂಜುನಾಥ್ ಜೊತೆ ಪ್ಲಾನ್ ರೂಪಿಸಿ, ಬಾಡಿಗೆಗೆ ಥಾರ್ ಕಾರು ತೆಗೆದು ರಾಮಾಂಜಿಯನ್ನು ಲಂಡನ್‌ಗೆ ಕರೆದೊಯ್ಯುವ ನೆಪದಲ್ಲಿ ಕಾರಿನಲ್ಲಿ ಕೂರಿಸಿಕೊಳ್ಳುತ್ತಾರೆ. ಆದರೆ ಹತ್ತಿರದ ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿಯ ಬಳಿ, ಕಾರಿನಲ್ಲೇ ಕುತ್ತಿಗೆಯ ಹಗ್ಗ ಬಿಗಿದು ಕೊಲೆ ಮಾಡಿ ಲಂಡನ್ ಬದಲಾಗಿ ನೇರವಾಗಿ ಯಮಲೋಕಕ್ಕೆ ಕಳುಹಿಸಿದ್ದಾರೆ.
ಕೊಲೆಯಾದ ಶವಕ್ಕೆ ದೊಡ್ಡ ದೊಡ್ಡ ಕಲ್ಲುಗಳನ್ನು ಕಟ್ಟಿ, ಶವ ಹೊರ ಬರಲ್ಲ ಎಂದು ಭಾವಿಸಿ ತೋಟದ ಬಾವಿಗೆ ಎಸೆದಿದ್ದಾರೆ. ಆದರೆ 5 ದಿನಗಳ ನಂತರ ಶವ ಬಾವಿಯಿಂದ ಹೊರಬಂದು ತೇಲಿದೆ. ಮೃತದೇಹ ನೋಡಿ ಸ್ಥಳೀಯರು ಶಾಕ್ ಆಗಿದ್ದಾರೆ. ಸದ್ಯ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.