Friday, July 18, 2025

Latest Posts

ಬಿಗ್​​ಬಾಸ್​​ಗೆ ಮತ್ತೆ ಕಿಚ್ಚ ಸುದೀಪ್ ವಾಪಸ್ ಬಂದಿದ್ದೇಕೆ..?

- Advertisement -

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12ಕ್ಕೆ ಇನ್ನೂ 2-3 ತಿಂಗಳು ಬಾಕಿ ಇದೆ. ಇದಕ್ಕೂ ಮುನ್ನವೇ ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಸಿಕ್ಕಿದೆ. ಕಿಚ್ಚ ಸುದೀಪ್ ಅವರೇ ಸೀಸನ್ 12ಕ್ಕೆ ಮತ್ತೆ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ. ಇವತ್ತು ನಡೆದ ದಿಢೀರ್ ಸುದ್ದಿಗೋಷ್ಠಿಯಲ್ಲಿ ಬಿಗ್ ಬಾಸ್ ಟೀಂ ಮತ್ತು ಕಿಚ್ಚ ಸುದೀಪ್ ಅವರೇ ಈ ಸುದ್ದಿಯನ್ನು ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಸುದ್ದಿಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ಬಿಚ್ಚಿಡಲಾಗಿದೆ.

ಕಿಚ್ಚ ಸುದೀಪ್ ಅವರೇ ಈವರೆಗೂ 11 ಸೀಸನ್​ಗಳಲ್ಲಿ ಬಿಗ್ ಬಾಸ್ ಶೋ ನಡೆಸಿಕೊಟ್ಟಿದ್ದಾರೆ. ಆದರೆ 12ನೇ ಸೀಸನ್​ಗೆ ಅವರು ನಿರೂಪಣೆ ಮಾಡಲ್ಲ ಎಂದು ಅವರೇ ಟ್ವೀಟ್ ಮಾಡಿದ್ದರು. ಸುದೀಪ್ ಇಲ್ಲ ಎಂದರೆ ಬಿಗ್ ಬಾಸ್ ಕಾರ್ಯಕ್ರಮವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಹೇಳಿದ್ದರು. ಈಗ ಕಿಚ್ಚ ಸುದೀಪ್ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ. ಮತ್ತೆ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಕೂಡ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲೇ ಮುಂದುವರಿಯಲಿದೆ. ಈ ಕುರಿತು ಕಲರ್ಸ್ ಕನ್ನಡ ವಾಹಿನಿ ಅಧಿಕೃತವಾಗಿ ಘೋಷಣೆ ಮಾಡಿದೆ.

ಬಿಗ್ ಬಾಸ್ ಶೋನಲ್ಲಿ ಕಿಚ್ಚ ಸುದೀಪ್ ಅವರನ್ನು ವೀಕ್ಷಕರು ಸಖತ್ ಇಷ್ಟಪಡುತ್ತಾರೆ. ಅವರನ್ನು ನೋಡುವ ಸಲುವಾಗಿಯೇ ವಾರಾಂತ್ಯದಲ್ಲಿ ಅಭಿಮಾನಿಗಳು ಟಿವಿ ಮುಂದೆ ಕೂರುತ್ತಾರೆ. ಸುದೀಪ್ ಇಲ್ಲದೇ ಇದ್ದರೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ನೋಡುವುದಿಲ್ಲ ಎಂದು ಕೂಡ ಅನೇಕ ವೀಕ್ಷಕರು ಹೇಳುತ್ತಿದ್ದರು. ಆದರೆ ಈಗ ಸುದೀಪ್ ಅವರೇ ನಿರೂಪಣೆ ಮಾಡಲು ಒಪ್ಪಿಕೊಂಡಿರುವುದು ಎಲ್ಲರಿಗೂ ಖುಷಿ ತಂದಿದೆ.

ಬಿಗ್ ಬಾಸ್ ಶೋ ನಡೆಸಿಕೊಡುವುದು ಸುಲಭವಲ್ಲ. ಅದಕ್ಕೆ ಸಾಕಷ್ಟು ಬದ್ಧತೆ ಬೇಕಾಗುತ್ತದೆ. ಸುದೀಪ್ ಅವರು ಸತತವಾಗಿ 11 ಸೀಸನ್​ಗಳನ್ನು ನಡೆಸಿಕೊಟ್ಟಿದ್ದಾರೆ. ಇದು ದಾಖಲೆ ಕೂಡ ಹೌದು. ಆ ದಾಖಲೆಯ ಜರ್ನಿಯನ್ನು ಅವರು ಮುಂದುವರಿಸಲಿದ್ದಾರೆ. 12ನೇ ಸೀಸನ್​ ನಡೆಸಿಕೊಡಲು ಅವರು ಒಪ್ಪಿಕೊಂಡಿದ್ದರಿಂದ ಬಿಗ್ ಬಾಸ್ ಸೀಸನ್ 12ರ ಕುತೂಹಲ ಹೆಚ್ಚಾಗಿದೆ.

ಕಿಚ್ಚ ಸುದೀಪ್ ಅವರಿಗೆ ಬಿಗ್ ಬಾಸ್ ಆಯೋಜಕರ ಬಗ್ಗೆ ಬೇಸರ, ಮುನಿಸು ಇದೆಯಾ ಎಂಬ ಅನುಮಾನ ಮೂಡಿತ್ತು. ಆ ಕಾರಣದಿಂದಲೇ ಅವರು ಶೋ ನಿರೂಪಣೆ ಮಾಡಲ್ಲ ಎಂದು ಕಳೆದ ಸೀಸನ್‌ನಲ್ಲೇ ಘೋಷಿಸಿರಬಹುದಾ ಎಂಬ ಪ್ರಶ್ನೆ ಕೂಡ ಉದ್ಭವ ಆಗಿತ್ತು. ಆದರೆ ಆ ರೀತಿ ಏನೂ ಅಸಮಾಧಾನ ಇಲ್ಲ, ತಾವು ಯಾವುದೇ ಷರತ್ತು ಹಾಕಿಲ್ಲ ಎಂದು ಸುದೀಪ್ ಹೇಳಿದ್ದಾರೆ. ಅಲ್ಲದೇ ಸ್ಪರ್ಧಿಗಳ ಆಯ್ಕೆ ಬಗ್ಗೆಯೂ ತಮಗೆ ಅಸಮಾಧಾನ ಇಲ್ಲ ಎಂದು ಅವರು ಹೇಳಿದ್ದಾರೆ.

ಈ ಬಾರಿಯ ಬಿಗ್​ಬಾಸ್​ ಸೀಸನ್ 12 ನಿರೂಪಣೆ ಸಾರಥ್ಯವನ್ನು ಕಿಚ್ಚ ಸುದೀಪ್​ ಅವರೇ ವಹಿಸಿಕೊಳ್ಳುತ್ತಿದ್ದಾರೆ. ಇದು ಕಿಚ್ಚ ಸುದೀಪ್​ ಅವರ ಅಭಿಮಾನಿಗಳಿಗೆ, ಬಿಗ್​ಬಾಸ್​ ವೀಕ್ಷಕರಿಗೆ ಖುಷಿ ಕೊಟ್ಟಿದೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರು ಮತ್ತೆ ಬಿಗ್​ಬಾಸ್​ ನಿರೂಪಣೆ ಒಪ್ಪಿಕೊಳ್ಳಲು ಕಾರಣ ಏನು ಅಂತ ಬಹಿರಂಗ ಪಡಿಸಿದ್ದಾರೆ. ಬಿಗ್​ಬಾಸ್​ ಶುರುವಾಗುತ್ತೆ ಅಂದ್ರೆ ಅಷ್ಟೊಂದು ಜನ ನೋಡ್ತಾರೆ ಅಂದ್ರೆ ಅದಕ್ಕೆ ಅಷ್ಟು ಇಂಪಾರ್ಟೆನ್ಸ್ ಇದೆ. ಹಾಗೇ ನೋಡಿದ್ರೆ ಜನರು ನನ್ನ ಮೇಲೆ ಇಟ್ಟಿರೋ ಪ್ರೀತಿ, ಗೌರವ ಕಾಣಿಸಿದೆ. ನಾನು ವಾಪಸ್​ ಬರೋದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬರು ನನಗೆ ಕರೆದ ರೀತಿ ಇರಬಹುದು. ಅವರು ನನ್ನ ಮೇಲೆ ಇಟ್ಟಿರೋ ಪ್ರೀತಿ ಇರಬಹುದು. ಜನ ಅಭಿಪ್ರಾಯ, ನನ್ನ ಸ್ನೇಹಿತರು ಈ ಬಗ್ಗೆ ಹೇಳಿದ್ದು, ಬಿಗ್​ಬಾಸ್​ ಟೀಮ್ ಪದೇ ಪದೇ ಬಂತು ಮನವೊಲಿಸಿದ್ದಕ್ಕೆ ನಾನು ಇದ್ದೇನೆ ಅಂತ ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಯಾವಾಗಿನಿಂದ ಪ್ರಸಾರ ಆಗಲಿದೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ‘ಕಲರ್ಸ್ ಕನ್ನಡ’ ತಿಳಿಸಿದೆ. ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬ ಲೆಕ್ಕಾಚಾರ ಈಗಲೇ ಶುರುವಾಗಿದೆ.

- Advertisement -

Latest Posts

Don't Miss